ಮೂರು ತಾಣಗಳನ್ನು ಬಿಟ್ಟು ಕೊಡಗು ಪ್ರವಾಸಿಗರಿಗೆ ಮುಕ್ತ!

ಮಡಿಕೇರಿ: ಭಾರೀ ಮಳೆ ಹಾಗೂ ಭಯಾನಕ ಭೂ ಕುಸಿತಕ್ಕೆ ತುತ್ತಾಗಿದ್ದ ಪ್ರವಾಸಿಗರ ಸ್ವರ್ಗ ಕೊಡಗು ಅಕ್ಷರಶಃ ತತ್ತರಿಸಿತ್ತು. ಹೀಗಾಗಿ ಮಡಿಕೇರಿಗೆ ಪ್ರವಾಸಿಗರನ್ನು ನಿಷೇಧಿಸಲಾಗಿತ್ತು. ಆದ್ರೆ ಇದೀಗ ಕೊಡಗಿಗೆ ಪ್ರವಾಸಿಗರು ಸ್ವಲ್ಪ ಸ್ವಲ್ಪವಾಗಿ ಬರಲು ಪ್ರಾರಂಭಿಸಿದ್ದಾರೆ.

ಆಗಸ್ಟ್ 10ರ ನಂತರ ತಿಂಗಳ ಕೊನೆವರೆಗೂ ಕೊಡಗು ಅಪಾಯದ ಸ್ಥಳವಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೊಡಗು ಟೂರಿಸಂ ಒಂದು ತಿಂಗಳ ಕಾಲ ಬ್ಯಾನ್ ಆಗಿತ್ತು. ಪ್ರವಾಸಿಗರು ಕೊಡಗು ಪ್ರವೇಶಿಸದಂತೆ ನಿರ್ಭಂಧ ಹೇರಲಾಗಿತ್ತು. ಆದರೆ ಈಗ ಅಬ್ಬಿಫಾಲ್ಸ್, ಮಾಂದಲ್‍ಪಟ್ಟಿ, ತಡಿಯಂಡಮೋಳ್‍ಯಂತಹ ಪ್ರಮುಖ ಪ್ರವಾಸಿ ತಾಣಗಳನ್ನು ಬಿಟ್ಟು ಉಳಿದಂತ ಸ್ಥಳಗಳಿಗೆ ಪ್ರವಾಸಿಗರು ಬರುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಇದೀಗ ಪ್ರವಾಸಿಗರ ಹಾಟ್ ಸ್ಪಾಟ್ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಕೊಡಗು ಪ್ರವಾಸಿಗರಿಗೆ ಮುಕ್ತವಾದಂತಾಗಿದೆ. ಪ್ರವಾಸೋದ್ಯಮ ನಂಬಿದ್ದವರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಇನ್ನೂ ಕೂಡಾ ಮಡಿಕೇರಿ-ಸೋಮವಾರಪೇಟೆ, ಹಾಸನ-ಮಡಿಕೇರಿ-ಮಂಗಳೂರು ಹಾಗೂ ಅಬ್ಬಿಫಾಲ್ಸ್, ಮಾಂದಲ್‍ಪಟ್ಟಿ, ತಡಿಯಂಡಮೋಳ್‍ಯಂತಹ ಪ್ರಮುಖ ಪ್ರವಾಸಿ ತಾಣಗಳ ರಸ್ತೆ ಸಂಚಾರಕ್ಕೆ ಮುಕ್ತವಾಗದಿರುವುದರಿಂದ ಈ ಮೂರೂ ತಾಣಗಳ ಭೇಟಿಗೆ ನಿಷೇಧ ಮುಂದುವರಿಸಲಾಗಿದೆ.

ಮಂಜಿನ ನಗರಿ ಮಡಿಕೇರಿ ರಾಜಾಸೀಟ್ ದುಬಾರೆ ನಿಸರ್ಗಧಾಮಗಳಲ್ಲಿ ಪ್ರವಾಸಿಗರು ಕಂಡು ಬರುತ್ತಿದ್ದಾರೆ. ಅಲ್ಲದೆ ವಿಕೇಂಡ್ ಗಳನ್ನು ಎಂಜಾಯ್ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಈ ಹಿಂದೆ ಜಿಲ್ಲಾಧಿಕಾರಿಗಳು ಆಗಸ್ಟ್ 31ರವರೆಗೂ ಕೊಡಗಿಗೆ ಪ್ರವಾಸಿಗರು ಬರಬಾರದು ಎಂದು ಆದೇಶ ಹೊರಡಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *