39ನೇ ವಸಂತಕ್ಕೆ ಕಾಲಿಟ್ಟ ಗೋಲ್ಡನ್ ಸ್ಟಾರ್ – ಹುಟ್ಟುಹಬ್ಬಕ್ಕೆ ಗೀತಾ ಟೀಸರ್ ರಿಲೀಸ್

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ‘ಗೀತಾ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.

ಗಣೇಶ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರಿನಲ್ಲಿ ಸ್ಪಷ್ಟನೆ ಕೂಡ ನೀಡಿದ್ದರು. ಇಂದು ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಅವರು ಅಭಿನಯದ ‘ಗೀತಾ’ ಚಿತ್ರದ ಟೀಸರ್ ರಿಲೀಸ್ ಆಗಿದೆ.

ಗೀತಾ ಚಿತ್ರದ ಟೀಸರ್ ನಲ್ಲಿ ಗಣೇಶ್ ಕನ್ನಡ ಭಾಷೆಗಾಗಿ ಹೋರಾಟ ನಡೆಸಿದ್ದಾರೆ. ಅಲ್ಲದೆ ಗಣೇಶ್ ‘ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ’, ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ’ ಎಂಬ ಪಂಚಿಂಗ್ ಡೈಲಾಗ್‍ನಲ್ಲಿ ಹೊಡೆದಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಮನಾಲಿ, ಕೋಲ್ಕತ್ತಾ, ಮೈಸೂರು, ಹೈದರಾಬಾದ್, ಬೆಂಗಳೂರು ಮತ್ತು ಇನ್ನಿತರ ಸ್ಥಳಗಳಲ್ಲಿ ನಡೆಸಲಾಗಿದೆ. ಗಣೇಶ್ ಅವರೊಡನೆ ಸಾನ್ವಿ, ಪಾರ್ವತಿ, ಪ್ರಯಾಗ ಮಾರ್ಟಿನ್, ಸುಧಾರಾಣಿ, ದೇವರಾಜ್, ಅಚ್ಯುತ್, ರಂಗಾಯಣ ರಘು ಮತ್ತು ಇನ್ನಿತರರು ಅಭಿನಯಿಸಿದ್ದಾರೆ.

ಹುಟ್ಟುಹಬ್ಬ ಏಕೆ ಆಚರಿಸುತ್ತಿಲ್ಲ:
ಗಣೇಶ್ ತಮ್ಮ ಟ್ವಿಟ್ಟರಿನಲ್ಲಿ, ನನ್ನ ಅಚ್ಚು ಮೆಚ್ಚಿನ ಪ್ರೀತಿಯ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರಲ್ಲಿ ಒಂದು ಕಳಕಳಿಯ ವಿನಂತಿ. ಈ ಸಲ ನಾನು ಹುಟ್ಟುಹಬ್ಬ ಆಚರಿಸುತ್ತಿಲ್ಲ. ಕಾರಣ ಕೆಲವು ತಿಂಗಳ ಹಿಂದೆಯಷ್ಟೇ ನನ್ನ ತಂದೆಯವರನ್ನು ಅಗಲಿದ್ದೇನೆ ಅಲ್ಲದೇ ಈ ಸಂದರ್ಭದಲ್ಲಿ ಮನೆಯಲ್ಲಿ ನಾವ್ಯಾರೂ ಇರುವುದಿಲ್ಲ. ಆದ್ದರಿಂದ ದೂರದ ಊರುಗಳಿಂದ ಬಂದು ಕಾಯುವ ಪ್ರಯತ್ನ ಮಾಡಬೇಡಿ. ನನ್ನ ಹುಟ್ಟುಹಬ್ಬ ಆಚರಿಸಲು ದೂರದಿಂದ ಹಲವು ಸಿದ್ಧತೆಗಳೊಂದಿಗೆ ಬಂದು ಶುಭಕೋರಿ ಸಂಭ್ರಮಿಸುವ ನಿಮ್ಮ ಪ್ರೀತಿಗೆ ನಾನೆಂದೂ ಋಣಿ.

ಆದ್ದರಿಂದ ಅಭಿಮಾನಿಗಳು ದಯವಿಟ್ಟು ಹಾರ, ಕೇಕ್, ಬ್ಯಾನರ್ ಗಳಿಗಾಗಿ ಹಣ ಖರ್ಚು ಮಾಡದೇ ಹತ್ತಿರದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯವಾಗುವಂತಹ ಕೆಲಸ ಮಾಡಿದರೆ ಅದೇ ನನಗೆ ನೀವು ಕೊಡುವ ಅತ್ಯುತ್ತಮ ಉಡುಗೊರೆ, ಇಷ್ಟು ಪ್ರೀತಿ, ಅಭಿಮಾನ ಹೊಂದಿರುವ ನೀವು ನನ್ನ ಕೋರಿಕೆಯನ್ನು ಅರ್ಥ ಮಾಡಿಕೊಂಡು, ಗಂಭೀರವಾಗಿ ಪರಿಗಣಿಸುವಿರಿ ಎಂಬ ಸಂಪೂರ್ಣ ವಿಶ್ವಾಸವಿದೆ. ದಯವಿಟ್ಟು ಸಹಕರಿಸಿ. ನಿಮ್ಮ ಪ್ರೀತಿ ಸದಾ ಇರಲಿ ಎಂದು ಗಣೇಶ್ ವಿನಂತಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *