ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ 4.11ಕಿಲೋ ಚಿನ್ನ ದರೋಡೆ!

ಉಡುಪಿ: ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ ಚಿನ್ನ ದರೊಡೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಮುಂಬೈನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಗಡಿಭಾಗ ಪಡುಬಿದ್ರೆ ಗ್ರಾಮವನ್ನು ಹಾದು ಹೋಗುತ್ತಿದ್ದ ವೇಳೆ ಚಿನ್ನದ ದರೋಡೆ ನಡೆದಿದೆ.

S7 ಸ್ಲೀಪರ್ ಕೋಚ್ ನಿಂದ ರಾಜೇಂದ್ರ ಸಿಂಗ್ ಎಂಬವರನ್ನು ಆಗಂತುಕರ ತಂಡವೊಂದು ಸೀಟಿನಿಂದ ಹೊರ ಎಳೆದಿದೆ. ಬಳಿಕ ಚೂರಿ, ಪಿಸ್ತೂಲ್ ತೋರಿಸಿ ಸಿಂಗ್ ಕೈಯಲ್ಲಿದ್ದ ಸೂಟ್ ಕೇಸ್ ಎಳೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸೂಟ್ ಕೇಸಲ್ಲಿ 4.11 ಕಿಲೋ ಚಿನ್ನದೊಡವೆಗಳಿತ್ತು ಅಂತ ಸಿಂಗ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೈಲು ನಿಲ್ದಾಣದಿಂದ ಪರಾರಿಯಾಗಿರೋದಾಗಿ ರಾಜೇಂದ್ರ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಕಳ ಎಎಸ್ಪಿ ಹೃಷಿಕೇಷ್ ನೇತೃತ್ವದಲ್ಲಿ ಮೂರು ತಂಡ ರಚನೆ ಮಾಡಲಾಗಿದೆ.

ಆರೋಪಿಗಳು ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ದರೋಡೆ ಕೃತ್ಯ ಎಸಗಿದ್ದಾರೆ. ಉಡುಪಿ ಎಸ್.ಪಿ ಡಾ. ಸಂಜೀವ ಪಾಟೀಲ್ ಮಾಹಿತಿಗಳನ್ನು ತರಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ರಾಜೇಂದ್ರ ಸಿಂಗ್ ಮುಂಬೈನ ಜ್ಯುವೆಲ್ಲರಿ ಕಂಪೆನಿಯೊಂದರ ಉದ್ಯೋಗಿ. ಗೋವಾ, ಕಾರವಾರ, ಉಡುಪಿ, ಮಂಗಳೂರು, ಕೇರಳ, ತಮಿಳ್ನಾಡಿನಲ್ಲಿರೋ ಚಿನ್ನದಂಗಡಿಗಳಿಗೆ ಒಡವೆಗಳ ಸಪ್ಲೈ ಮಾಡುತ್ತಿದ್ದರು. ಸಿಂಗ್ ಆರ್ಡರ್ ತೆಗೆದುಕೊಂಡು ಚಿನ್ನ ಕೊಡಲು ರೈಲು ಹತ್ತಿದ್ದರು. ಈ ಎಲ್ಲಾ ಮಾಹಿತಿಯಿದ್ದ ಯಾರೋ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *