ಅಧಿಕಾರಿಗಳು ಕೈಕೊಟ್ರೂ ಕೈಹಿಡಿದ ದೇವರು- ಚಾಮುಂಡೇಶ್ವರಿಗೆ ಪತ್ರ ಬರೆದೊಡನೆ ಸಿಕ್ತು ನೆರವು

ಕೊಪ್ಪಳ: ಜಿಲ್ಲೆಯ ಗಂಗಾವತಿಯ ಲಿಂಗರಾಜ ಕಾಲೋನಿಯಲ್ಲಿ ಬಡ ಕುಟುಂಬವೊಂದು ನಮಗೆ ಮನೆ ಕಟ್ಟಲು ಸ್ವಲ್ಪ ಸಹಾಯ ಮಾಡಿ ಎಂದು ಅಧಿಕಾರಗಳ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಯಾವುದೇ ಅಧಿಕಾರಿಗಳು ಇವರ ಸಹಾಯಕ್ಕೆ ಮುಂದೆ ಬಂದಿರಲಿಲ್ಲ. ಇದೀಗ ಚಾಮುಂಡೇಶ್ವರಿಗೆ ಪತ್ರ ಬರೆದ ತಕ್ಷಣ ಬಡ ಕುಟುಂಬಕ್ಕೆ ನೆರವು ಸಿಕ್ಕಿದೆ.

ಇದು ಲಿಂಗರಾಜ ಕಾಲೋನಿಯ ಗಾಯಿತ್ರಿ-ಮಲ್ಲಿಕಾರ್ಜುನ ಕುಟುಂಬದ ಕರುಣಾಜನಕ ಕಥೆ. ಅಂಗವಿಕಲರಾಗಿರುವ ಗಾಯಿತ್ರಿ ಪತಿ ರಿಕ್ಷಾ ಓಡಿಸುತ್ತಿದ್ದು, ಅದರಲ್ಲಿ ಬಂದ ಅಲ್ಪ ಸ್ವಲ್ಪ ಹಣವೇ ಇವರಿಗೆ ಆಧಾರವಾಗಿದೆ. ಗಾಯಿತ್ರಿ ಕುಟುಂಬಕ್ಕೆ ಹಿರಿಯರಿಂದ ಬಳುವಳಿಯಾಗಿ ಒಂದು ಪುಟ್ಟ ಮನೆ ಬಂದಿತ್ತು. ಆ ಮನೆಯಲ್ಲೇ ತನ್ನಿಬ್ಬರು ಮಕ್ಕಳೊಂದಿಗೆ ಈ ಕುಟುಂಬ ವಾಸವಾಗಿದೆ. ಈ ಮನೆಯ ಪರಿಸ್ಥಿತಿಯನ್ನೊಮ್ಮೆ ನೋಡಿದರೆ ಎಂತವರಿಗೂ ಭಯ ಹುಟ್ಟಿಸುತ್ತೆ. ಹೆಗ್ಗಣಗಳ ಕಾಟದಿಂದ ಇಡೀ ಮನೆ ಬಿರುಕು ಬಿಟ್ಟಿದ್ದು, ತಗಡಿನ ಮೇಲ್ಚಾವಣಿ ಸಂಪೂರ್ಣವಾಗಿ ಸೋರುತ್ತಿದೆ. ಇದರಲ್ಲೇ ಈ ಕುಟುಂಬ ಆಸರೆ ಪಡೆಯುತ್ತಿದೆ.

ನಮಗೆ ಮನೆ ಕಟ್ಟಿಕೊಳ್ಳಲು ಸ್ವಲ್ಪ ಅನುಕೂಲ ಮಾಡಿ ಕೊಡಿ ಅಂತಾ ಅಧಿಕಾರಿಗಳು, ಜನಪ್ರತಿನಿಧಿಗಳನ್ನ ಕೇಳಿದರೆ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ನಂತರ ನಾವು ರಾಮನಗರ ಜಿಲ್ಲೆ ಚನ್ನಪಟ್ಟಣದ ಗೌಡಗೇರೆ ಗ್ರಾಮದಲ್ಲಿರುವ ಚಾಮುಂಡೇಶ್ವರಿ ಅಮ್ಮನ್ನವರ ಮೊರೆ ಹೋದೆವು. ಈ ದೇವಾಲಯಕ್ಕೆ ಪತ್ರ ಬರೆದು ನಮ್ಮ ನೋವುಗಳನ್ನು ಪತ್ರದ ಮೂಲಕ ಹೇಳಿಕೊಂಡಿದ್ದೆವು. ನಮ್ಮ ಪತ್ರಕ್ಕೆ ಸ್ಪಂದಿಸಿದ ದೇವಾಲಯ ಆಡಳಿತ ಮಂಡಳಿ, ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಕುಟುಂಬದ ಮಾಹಿತಿ ಪಡೆದುಕೊಂಡು ಸಹಾಯ ಮಾಡುವ ಭರವಸೆ ನೀಡಿದೆ ಎಂದು ಪತ್ರ ಬರೆದಿದ್ದ ಗಾಯಿತ್ರಿ ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *