5 ದಿನ ಪ್ರಧಾನಿ ಆದರೆ ಸಾಕು, ದೇಶವನ್ನು ಬದಲಾವಣೆ ಮಾಡುತ್ತೇನೆ: ಹುಚ್ಚ ವೆಂಕಟ್

ಮಡಿಕೇರಿ: ಈ ಬಾರಿಯ ವಿಧಾನಸಭಾ ಚುನಾವಣೆ ಮೂಲಕ ತಾನು ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ನಟ, ನಿರ್ಮಾಪಕ, ನಿರ್ದೇಶಕ ಹುಚ್ಚ ವೆಂಕಟ್ ಹೇಳಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್, ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನಿರ್ಮಿಸುತ್ತಾ ಜನರ ಸೇವೆಯನ್ನು ಮಾಡುತ್ತಿದ್ದೇನೆ. ಇದೀಗ ರಾಜಕೀಯವಾಗಿ ಜನರ ಸೇವೆ ಮಾಡಲು ಮುಂದಾಗಿದ್ದೇನೆ. ಈ ಹಿನ್ನಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ನನ್ನ ತತ್ವ ಸಿದ್ಧಾಂತಗಳಿಗೆ ಒಪ್ಪಿ ರಾಜಕೀಯ ಪಕ್ಷಗಳು ಆಫರ್ ಕೊಟ್ಟರೆ ಹೋಗುತ್ತೇನೆ. ನಾನು ಚುನಾವಣೆಯಲ್ಲಿ ಸೀರೆ, ಹೆಂಡ, ಹಣ ಕೊಡಲ್ಲ. ಜನರಿಗೆ ಕೈ ಮುಗಿಯಲ್ಲ ಮತ್ತು ಕ್ಯಾನ್ವಾಸ್ ಮಾಡಲ್ಲ. ನಾನು ಓಟ್ ನ ಭಿಕ್ಷೆ ಬೇಡಲ್ಲ. ಇಲ್ಲ ನಿಮ್ಮನ್ನ ನಾನು ಕೊಂಡುಕೊಳ್ಳಲ್ಲ. ನಿಮ್ಮ ಕೆಲಸ ಮಾಡಬೇಕು ಎಂದು ಬಂದಿದ್ದೇನೆ ಕೆಲಸ ಕೊಡಿ ಎಂದು ಹೇಳಿದ್ದಾರೆ.

ನನ್ನ ತತ್ವ ಸಿದ್ಧಾಂತಗಳಿಗೆ ಒಪ್ಪಿಕೊಂಡು ರಾಜಕೀಯ ಪಕ್ಷಗಳು ಆಹ್ವಾನ ನೀಡಿದರೆ ಪಕ್ಷದ ಮೂಲಕ ಚುನಾವಣೆ ಎದುರಿಸುತ್ತೇನೆ. ಇಲ್ಲವಾದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತೇನೆ. ಜನರಿಗೆ ಕೈ ಕೂಡಾ ಮುಗಿಯುವುದಿಲ್ಲ. ಜನರ ಕೆಲಸ ಮಾಡಬೇಕು ಅಂತಾ ನಾನು ಬರುತ್ತಿದ್ದೇನೆ. ಜನತೆ ಅವರ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

ನಾನು ಶಾಸಕನಾಗಿ ಮುಂದೆ ಮುಖ್ಯಮಂತ್ರಿ ಕೂಡಾ ಆಗುತ್ತೇನೆ. ನಂತರ ಪ್ರಧಾನಿ ಕೂಡ ಆಗುತ್ತೇನೆ. ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡುತ್ತೇನೆ, ನನಗೆ ಕೇವಲ 5 ದಿನ ಪ್ರಧಾನಿಯಾಗುವ ಅವಕಾಶ ನೀಡಿದರೆ ದೇಶವನ್ನು ಬದಲಾಯಿಸುತ್ತೇನೆ. ಇಡೀ ವಿಶ್ವವೇ ಭಾರತ ನಂ. 1 ಎನ್ನುವಂತೆ ಮಾಡುತ್ತೇನೆ ಎಂದು ಅವರು ಹೇಳಿದರು.

ನಾನು ಇಲ್ಲಿ ಸೋತರೆ ದೆಹಲಿಗೆ ಹೋಗುತ್ತೇನೆ. ಅಲ್ಲೂ ಸೋತರೆ ಅಮೆರಿಕಕ್ಕೆ ಹೋಗುತ್ತೇನೆ. ನನಗೆ ಕರ್ನಾಟಕದಲ್ಲಿ ಮಾತ್ರ ಅಭಿಮಾನಿಗಳಿಲ್ಲ. ಎಲ್ಲ ಕಡೆನೂ ಇದ್ದಾರೆ. ಆದರೆ ನನ್ನ ಮನೆ ಇರುವುದು ಕರ್ನಾಟಕದಲ್ಲಿ ನನ್ನನ್ನು ಸೋಲಿಸಿದರೂ ನಾನು ಬೇಸರಪಡದೆ ಜನರ ಸೇವೆ ಮಾಡುತ್ತೇನೆ. ರಾಜಕೀಯದಲ್ಲಿ ಇದ್ದು ಜನರ ಕೆಲಸ ಮಾಡಬೇಕೆಂದಿಲ್ಲ ಎಂದು ಹುಚ್ಚ ವೆಂಕಟ್ ಸ್ಪಷ್ಟ ಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *