ಅಪ್ರಾಪ್ತೆ ಜೊತೆ ಫೇಸ್‍ಬುಕ್‍ನಲ್ಲಿ ರಷ್ಯಾ ಯುವಕನ ಗೆಳೆತನ

– ರಾಜಸ್ಥಾನಕ್ಕೆ ಬಂದು ಅತ್ಯಾಚಾರಗೈದು ಪರಾರಿ

ಜೈಪುರ: ರಷ್ಯಾ ಯುವಕನೊಬ್ಬ ಅಪ್ರಾಪ್ತೆ ಜೊತೆ ಫೇಸ್‍ಬುಕ್‍ನಲ್ಲಿ ಗೆಳೆತನ ಮಾಡಿಕೊಂಡು ಬಳಿಕ ಆಕೆ ಇರುವ ಸ್ಥಳಕ್ಕೆ ಬಂದು ಅತ್ಯಾಚಾರ ಮಾಡಿ ಪರಾರಿಯಾದ ಘಟನೆ ರಾಜಸ್ಥಾನದ ದುಂಗರಪುರ ಜಿಲ್ಲೆಯ ಸಾಗ್ವಾರಾದಲ್ಲಿ ನಡೆದಿದೆ.

ಆರೋಪಿ ಮೂಲತಃ ರಾಜಸ್ಥಾನದವನಾಗಿದ್ದು, ವಿದ್ಯಾಭ್ಯಾಸಕ್ಕಾಗಿ ರಷ್ಯಾಗೆ ತೆರಳಿದ್ದನು. ಈ ವೇಳೆ ಆರೋಪಿ ಅಪ್ರಾಪ್ತೆಯನ್ನು ಫೇಸ್‍ಬುಕ್‍ನಲ್ಲಿ ಫ್ರೆಂಡ್ ಮಾಡಿಕೊಂಡಿದ್ದಾನೆ. ಬಳಿಕ ಇಬ್ಬರು ಪರಸ್ಪರ ಇಷ್ಟಪಡಲು ಶುರು ಮಾಡಿದ್ದು, ಮದುವೆ ಆಗಲು ನಿರ್ಧರಿಸಿದ್ದರು.

ನನ್ನನ್ನು ಮದುವೆ ಆಗಲು ಆತ ಸಾಗ್ವಾರಾಕ್ಕೆ ಬಂದಿದ್ದು, ಭೇಟಿ ಮಾಡಲು ಹತ್ತಿರದ ಹೋಟೆಲಿನಲ್ಲಿ ರೂಂ ಬುಕ್ ಮಾಡಿದ್ದನು. ಬಳಿಕ ಮದುವೆ ಆಗುತ್ತೇನೆ ಎಂದು ಸುಳ್ಳು ಭರವಸೆ ನೀಡಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

ಆರೋಪಿ ಅತ್ಯಾಚಾರ ಮಾಡಿದ ನಂತರ ರಷ್ಯಾಗೆ ಪರಾರಿ ಆಗಿದ್ದಾನೆ. ಅಲ್ಲಿ ಆರೋಪಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಸದ್ಯ ಆತನ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಅಪ್ರಾಪ್ತೆ ಮೊದಲು ಆರೋಪಿಯನ್ನು ಫೇಸ್‍ಬುಕ್ ಫ್ರೆಂಡ್ ಮಾಡಿಕೊಂಡಿದ್ದಳು. ಬಳಿಕ ಫೇಸ್‍ಬುಕ್ ಅಲ್ಲದೆ ಕಳೆದ ಒಂದು ವರ್ಷದಿಂದ ಆರೋಪಿ ಜೊತೆ ಇನ್‍ಸ್ಟಾಗ್ರಾಂ ಹಾಗೂ ವಾಟ್ಸಾಪ್‍ನಲ್ಲಿ ಚಾಟಿಂಗ್ ಮಾಡುತ್ತಿದ್ದಳು ಎಂಬ ವಿಷಯ ತನಿಖೆ ವೇಳೆ ತಿಳಿದು ಬಂದಿದೆ.

ಅಲ್ಲದೆ ಆರೋಪಿ ಮುಂದಿನ ಬಾರಿ ಭಾರತಕ್ಕೆ ಬಂದಾಗ ಮದುವೆ ಆಗುತ್ತೇನೆ ಎಂದು ಹೇಳಿ ಅತ್ಯಾಚಾರ ಮಾಡಿದ್ದಾನೆ. ರಷ್ಯಾಗೆ ತೆರಳುತ್ತಿದ್ದಂತೆ ಆರೋಪಿ ಸಂತ್ರಸ್ತೆ ಜೊತೆಗಿನ ಎಲ್ಲ ಸಂಪರ್ಕವನ್ನು ಕಡಿದುಕೊಂಡಿದ್ದಾನೆ. ಹೀಗಾಗಿ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸುವಂತೆ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *