ಮೈಗ್ರೇನ್ ಚಿಕಿತ್ಸೆಗೆ ಬಂದಾಗ ಬೆಳಕಿಗೆ ಬಂತು ಅಪ್ಪನೇ ಮಾಡ್ತಿದ್ದ ಅತ್ಯಾಚಾರ..!

ನವದೆಹಲಿ: ಆಕೆಗಿನ್ನೂ 17 ವರ್ಷ ಪ್ರಾಯ. ಕಳೆದ ಕೆಲ ದಿನಗಳಿಂದ ಆಕೆಗೆ ವಿಪರೀತ ತಲೆ ನೋವು ಕಾಡಲು ಶುರುವಾಗಿತ್ತು. ಹೀಗಾಗಿ ಆಕೆ ದೂರದ ಬಿಹಾರದಿಂದ ಮೈಗ್ರೇನ್ ಚಿಕಿತ್ಸೆಗೆಂದು ದೆಹಲಿಗೆ ಆಗಮಿಸಿದ್ದಳು. ಈಕೆಯ ಮೈಗ್ರೇನ್ ತಲೆನೋವಿಗೆ ಚಿಕಿತ್ಸೆ ಆರಂಭಿಸಿದ ವೈದ್ಯರು ಈಕೆಯ ಮಾತು ಕೇಳಿ ಬೆಚ್ಚಿ ಬಿದ್ದಿದ್ದಾರೆ. ಕಾರಣ ಆಕೆಯ ಮೈಗ್ರೇನ್ ತಲೆನೋವಿನ ಹಿಂದಿತ್ತು ವಿಚಿತ್ರ ಕಥೆ. ಅಷ್ಟು ದಿನ ಮೌನವಾಗಿಯೇ ಪ್ರತಿಭಟಿಸುತ್ತಿದ್ದ ಆಕೆ ವೈದ್ಯರ ಮುಂದೆ ತಾನು ಅನುಭವಿಸುತ್ತಿದ್ದ ವೇದನಾಜನಕ ಕತೆಯನ್ನು ಹೇಳಿದ್ದಳು. ಈ ಎಲ್ಲಾ ವಿಚಿತ್ರ ಕಥೆಗಳಿಗೆ ಮೂಕಪ್ರೇಕ್ಷಕರಾಗಿದ್ದು ಮಾತ್ರ ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆ ವೈದ್ಯರು.

ಆಕೆಯ ಊರು ಬಿಹಾರ ರಾಜ್ಯದ ಶೇಖ್‍ಪುರ್ ಜಿಲ್ಲೆಯ ಒಂದು ಗ್ರಾಮ. ತಂದೆ, ತಾಯಿ, ಸೋದರಿ ಜೊತೆ ವಾಸಿಸುತ್ತಿದ್ದಳು. ತಂದೆ ಕೃಷಿಕ. ಆದರೆ ಆತನೊಳಗೊಬ್ಬ ವಿಕೃತ ಕಾಮಿಯಿದ್ದ. ಆಕೆ ತನ್ನ ಸ್ವಂತ ಮಗಳು ಎಂಬುದನ್ನೂ ಮರೆತು ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಇಷ್ಟೇ ಅಲ್ಲ ತನ್ನ ಪುತ್ರಿಯನ್ನು ಬೆತ್ತಲೆಗೊಳಿಸಿ ಆತ ಮೊಬೈಲ್‍ನಲ್ಲಿ ಆಕೆಯ ಫೋಟೋ ತೆಗೆದಿಟ್ಟುಕೊಂಡಿದ್ದ. ಈ ಫೋಟೋಗಳನ್ನೇ ಪದೇ ಪದೇ ತೋರಿಸಿಕೊಂಡು ಆತ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ.

ತಲೆನೋವಿಗೆ ಕಾರಣವಾಗಿದ್ದೇ ಈ ಮೊಬೈಲ್!: ಹೀಗೆ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಎಸಗಿದ ಸಾಕ್ಷ್ಯಾಧಾರಗಳಿರುವ ಮೊಬೈಲ್ ಆಕೆಯ ತಂದೆ ದೆಹಲಿಗೆ ಬರುವ ರೈಲಿನಲ್ಲಿ ಕಳೆದುಹೋಗುತ್ತದೆ. ಇದಾದ ನಂತರ ಈಕೆಗೆ ಮೈಗ್ರೇನ್ ಕಾಣಿಸಿಕೊಂಡಿದೆ. ತಲೆ ನೋವು ತಡೆದುಕೊಳ್ಳಲು ಸಾಧ್ಯವೇ ಇಲ್ಲ ಅನ್ನಿಸಿದಾಗ ಆಕೆಯನ್ನು ಪೋಷಕರು ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯಲ್ಲಿ ಆರಂಭದಲ್ಲಿ ಆಕೆ ವೈದ್ಯರ ಬಳಿ ಏನನ್ನೂ ಹೇಳಿರುವುದಿಲ್ಲ. ಆದರೆ ಚಿಕಿತ್ಸೆ ಮುಂದುವರಿದ ಭಾಗವಾಗಿ ವೈದ್ಯರು ತಲೆನೋವಿಗೆ ಕಾರಣವಾದ ಘಟನೆಗಳನ್ನು ಕೇಳಿದಾಗ ಆಕೆ ತನ್ನ ಜೀವನದಲ್ಲಿ ಆದ ಘಟನೆಗಳನ್ನು ಬಾಯಿ ಬಿಟ್ಟಿದ್ದಾಳೆ.

‘ನನ್ನ ತಂದೆ ರಾತ್ರಿ ಮಲಗಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಕಳೆದ ಕೆಲವರ್ಷಗಳಿಂದ ನನ್ನ ಮೇಲೆ ನಿರಂತರ ದೌರ್ಜನ್ಯ, ಅತ್ಯಾಚಾರ ನಡೆಸುತ್ತಿದ್ದ. ನಾನು ಇದಕ್ಕೆ ಪ್ರತಿಭಟಿಸಿದರೆ ನನಗೆ ಹೊಡೆಯುತ್ತಿದ್ದ. ಅಲ್ಲದೆ ನನ್ನನ್ನು ಬೆದರಿಸುತ್ತಿದ್ದ. ಹೀಗಾಗಿ ನಾನು ಯಾರ ಜೊತೆಗೆ ಏನೂ ಹೇಳಿಕೊಂಡಿರಲಿಲ್ಲ. ಆದರೆ ತಂದೆಯ ಮೊಬೈಲ್‍ನಲ್ಲಿ ನನ್ನ ಹಲವಾರು ನಗ್ನ ಫೋಟೋಗಳಿದ್ದವು. ಈ ಮೊಬೈಲ್ ಕಳೆದುಹೋದ ಮೇಲೆ ನನಗೆ ತಲೆ ನೋವು ಶುರುವಾಯಿತು’ ಎಂದು ಬಾಯಿಬಿಟ್ಟಿದ್ದಾಳೆ. ಈ ವಿಚಾರ ತಿಳಿದ ವೈದ್ಯರು ತನ್ನ ಸೀನಿಯರ್ ಡಾಕ್ಟರ್ ಗೆ ಈ ವಿಚಾರ ತಿಳಿಸಿದ್ದಾರೆ. ನಂತರ ಆಕೆಯ ತಂದೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿದ ಬೆನ್ನಲ್ಲೇ ಪೊಲೀಸರು ಆಕೆಯ ತಂದೆಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರಿದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಮನೋಶಾಸ್ತ್ರಜ್ಞರ ಪ್ರಕಾರ, ಮಕ್ಕಳ ಮೇಲೆ ಆಗುವ ಈ ರೀತಿಯ ಲೈಂಗಿಕ ದೌರ್ಜನ್ಯಗಳಿಂದ ಅವರು ಖಿನ್ನತೆಗೆ ಜಾರುವ ಸಾಧ್ಯತೆಗಳಿವೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *