ಹಾಸನ ನಿಗೂಢ ಸಾವು ಕೇಸ್ – 18ನೇ ವಯಸ್ಸಿಗೆ ಮನೆ ಬಿಟ್ಟಿದ್ದ ಯುವತಿ

– ರಾತ್ರಿ ಹೋಟೆಲ್‍ಗೆ ಹೋಗಿದ್ದ ಪುನಿತ್
– ಆತ್ಮಹತ್ಯೆಯೋ? ಕೊಲೆಯೋ ತನಿಖೆ ಆರಂಭ

ಹಾಸನ: ಜಿಲ್ಲೆಯ ಖಾಸಗಿ ಹೋಟೆಲ್ ಬಳಿ ಅನುಮಾನಾಸ್ಪದವಾಗಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮೃತ ಯುವತಿ 18ನೇ ವಯಸ್ಸಿನಲ್ಲೇ ಪ್ರೀತಿ ವಿಚಾರವಾಗಿ ಮನೆ ಬಿಟ್ಟಿದ್ದಳು ಎನ್ನುವ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಹೋಟೆಲ್ ಹಿಂಭಾಗ ಯುವತಿಯ ಮೃತದೇಹ ಪತ್ತೆ

ಅರಕಲಗೂಡು ಮೂಲದ ಭವಿತಾ (23) ಬಿಎಂ ರಸ್ತೆಯಲ್ಲಿರುವ ಸರಾಯು ಹೋಟೆಲ್‍ನ ಹಿಂಭಾಗದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಪೊಲೀಸರು ಯುವತಿಯ ಕೈ ಮೇಲೆ ಹಾಕಿಸಿಕೊಂಡಿದ್ದ ಹಚ್ಚೆಯಂತೆ ಪುನಿತ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಮೃತ ಭವಿತಾ 18ನೇ ವಯಸ್ಸಿನಲ್ಲೇ ಪ್ರೀತಿ ವಿಚಾರವಾಗಿ ಜಗಳವಾಡಿಕೊಂಡು ಮನೆ ಬಿಟ್ಟು ಬಂದಿದ್ದಳು. ನಂತರ ಅವರ ತಂದೆ ಪೊಲೀಸ್ ದೂರು ನೀಡಿದ್ದರು. ಪೊಲೀಸರ ಕೈಗೆ ಸಿಕ್ಕಿದ್ದಳು. ಆದರೆ ಆಕೆ ಮನೆಗೆ ತೆರಳಲು ಎಂದು ನಿರಾಕರಿಸಿದ್ದಳು. ಹೀಗಾಗಿ ಅಂದಿನಿಂದ ಪೋಷಕರು ಕೂಡ ಆಕೆಯನ್ನ ಸಂಪರ್ಕಿಸಿರಲಿಲ್ಲ. ಭವಿತಾ ಹೆಚ್ಚಾಗಿ ವಿದ್ಯಾಭ್ಯಾಸ ಮಾಡಿಲ್ಲ. ಆದರೆ ಈಕೆಗೆ ಮೂವರು ಪ್ರಿಯಕರರು ಇದ್ದರು ಎನ್ನುವ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ.

12 ದಿನಗಳಿಂದ ಹೋಟೆಲ್ ರೂಮಿನಲ್ಲಿದ್ದ ಈಕೆ ಫೇಸ್‍ಬುಕ್ ಖಾತೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದೇನೆ ಎನ್ನುವ ವಿಚಾರವನ್ನು ಅಪ್‍ಡೇಟ್ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಖಾತೆಯಲ್ಲಿ ಸಾಕಷ್ಟು ಫೋಟೋಶೂಟ್ ಮಾಡಿಸಿಕೊಂಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾಳೆ.

ಶನಿವಾರ ರಾತ್ರಿ ಏನಾಯ್ತು?
ಶನಿವಾರ ರಾತ್ರಿ ಪುನಿತ್ ಆಕೆಯಿದ್ದ ರೂಮಿಗೆ ಬಂದಿದ್ದಾನೆ. ಆಗ ಇವರಿಬ್ಬರ ಮಧ್ಯೆ ಪ್ರೀತಿ ವಿಚಾರವಾಗಿ ಗಲಾಟೆ ನಡೆದಿದೆ. ಇದರಿಂದ ಬೇಸರ ಮಾಡಿಕೊಂಡು ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಪುನಿತ್ ಕೊಲೆ ಮಾಡಿದ್ದಾನೆಯೇ ಎಂದು ತಿಳಿದು ಬಂದಿಲ್ಲ. ಸದ್ಯಕ್ಕೆ ಪೊಲೀಸ್ ಪುನಿತ್ ಜೊತೆ ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ಹೋಟೆಲ್ ಹಿಂಭಾಗ ಭವಿತಾ ಮೃತದೇಹ ಪತ್ತೆಯಾಗಿತ್ತು. ದಾರಿಯಲ್ಲಿ ಓಡಾಡುತ್ತಿದ್ದ ಜನರು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಯುವತಿ ದೇಹದ ಹಲವು ಭಾಗಗಳಲ್ಲಿ ಹಚ್ಚೆ ಹಾಗೂ ಕೈ ಮೇಲೆ ಪುನಿತ್ ಎಂದು ಹಾಕಿಸಿಕೊಂಡಿರುವುದು ಪತ್ತೆಯಾಗಿತ್ತು.

Comments

Leave a Reply

Your email address will not be published. Required fields are marked *