3 ದಿನ ನಡೆದು ಇನ್ನೇನೋ ಮನೆ ಸೇರೋ 1 ಗಂಟೆ ಮುಂಚೆ ಬಾಲಕಿ ಸಾವು

– ಕುಟುಂಬಕ್ಕಾಗಿ ಮೆಣಸಿನಕಾಯಿ ತೋಟದಲ್ಲಿ ಕೆಲಸ

ರಾಯ್ಪುರ: ಕೊರೊನಾದಿಂದ ಇಡೀ ದೇಶವೇ ತತ್ತರಿಸಿ ಹೋಗುತ್ತಿದೆ. ಹೀಗಾಗಿ ಅನೇಕ ಕಾರ್ಮಿಕರು ನಡೆದುಕೊಂಡು ತಮ್ಮ ತಮ್ಮ ಸ್ವ-ಗ್ರಾಮಕ್ಕೆ ಹೋಗಿದ್ದಾರೆ. ಈ ನಡುವೆ ತೆಲಂಗಾಣದಿಂದ ತಮ್ಮ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ಜಾಮ್ಲೋ ಮಕ್ಡಾಮ್ (12) ಮೃತ ಬಾಲಕಿ. ತೆಲಂಗಾಣದಿಂದ ಚತ್ತೀಸ್‍ಗಢದ ಬಿಜಾಪುರ ಜಿಲ್ಲೆಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿ ತೆಲಂಗಾಣದ ಗ್ರಾಮವೊಂದರಲ್ಲಿ ತನ್ನ ಕುಟುಂಬಕ್ಕಾಗಿ ಮೆಣಸಿನಕಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಲಾಕ್‍ಡೌನ್ ಆದ ಪರಿಣಾಮ ಏಪ್ರಿಲ್ 15ರಂದು ತನ್ನ ಜೊತೆ ಕೆಲಸ ಮಾಡುತ್ತಿದ್ದ 11 ಮಂದಿಯೊಂದಿಗೆ ತನ್ನ ಗ್ರಾಮಕ್ಕೆ ಹೋಗಲು ಕಾಲ್ನಡಿಗೆಯ ಮೂಲಕ ಹೊರಟ್ಟಿದ್ದಳು.

11 ಜನರು ಈ ಗುಂಪು ಮೂರು ದಿನಗಳ ಕಾಲ ನಡೆದಿದ್ದರು. ಆದರೆ ಶನಿವಾರ ಮಧ್ಯಾಹ್ನ ಬಾಲಕಿ ತನ್ನ ಮನೆಗ ಇನ್ನೂ 14 ಕಿ.ಮೀ ದೂರದಲ್ಲಿದ್ದಾಗ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಕೊನೆಗೆ ಆಕೆಯ ಮೃತದೇಹವನ್ನು ಅಂಬುಲೆನ್ಸ್ ನಲ್ಲಿ ಆಕೆಯ ಮನೆಗೆ ತೆಗೆದುಕೊಂಡು ಹೋಗಲಾಗಿದೆ.

ಬಾಲಕಿ ತೀವ್ರ ನಿರ್ಜಲೀಕರಣ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಳು. ಆಕೆಗೆ ಕೊರೊನಾ ಪರೀಕ್ಷೆ ಮಾಡಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಹಿರಿಯ ಜಿಲ್ಲಾ ವೈದ್ಯಕೀಯ ಅಧಿಕಾರಿ ಬಿ.ಆರ್.ಪುಜಾರಿ ಹೇಳಿದರು.

ಬಾಲಕಿಯ ತಂದೆ ಆಂಡೋರಮ್ ಮಾತನಾಡಿ, ತೆಲಂಗಾಣದಲ್ಲಿ ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದಳು. ಆದರೆ ಲಾಕ್‍ಡೌನ್ ಕಾರಣ ಅವಳು ಮೂರು ದಿನಗಳ ಕಾಲ ನಡೆದಿದ್ದಾಳೆ. ಹೀಗಾಗಿ ಮಗಳು ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಅವಳು ಸರಿಯಾಗಿ ಊಟ ಮಾಡುತ್ತಿರಲಿಲ್ಲ ಎಂದು ಕಣ್ಣೀರು ಹಾಕಿದರು.

ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಒಂದು ಲಕ್ಷ ರೂ.ಪರಿಹಾರ ನೀಡುವುದಾಗಿ ಘೋಷಿಸಿದೆ.

Comments

Leave a Reply

Your email address will not be published. Required fields are marked *