ತನ್ನ ಮನೆಯಲ್ಲಿಯೇ 12ರ ಬಾಲಕಿ ಶವವಾಗಿ ಪತ್ತೆ

– ಪೋಷಕರು ತೋಟಕ್ಕೆ ಹೋಗಿದ್ದಾಗ ಕೃತ್ಯ
– ಅರೆಬೆತ್ತಲೆ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಲಕ್ನೋ: ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.

12 ವರ್ಷದ ಬಾಲಕಿ ಮೃತಪಟ್ಟಿದ್ದು, ಮೃತ ಬಾಲಕಿ ಹಮೀರ್‌ಪುರದ ಚಿಕಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ವಾಸಿಸುತ್ತಿದ್ದಳು. ಬಾಲಕಿ ಮನೆಯಲ್ಲಿ ಒಬ್ಬಳೆ ಇದ್ದಾಗ ಈ ಘಟನೆ ನಡೆದಿದೆ. ಆಕೆಯ ದೇಹದಲ್ಲಿ ಅನೇಕ ಗಾಯಗಳಾಗಿವೆ. ಹೀಗಾಗಿ ಯಾರೋ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಬಾಲಕಿಯ ಪೋಷಕರು ಮತ್ತು ಸಹೋದರರು ತೋಟಕ್ಕೆ ಹೋಗಿದ್ದರು. ಸಂಜೆ ಮನೆಗೆ ಕುಟುಂಬದವರು ವಾಪಸ್ ಬಂದಾಗ ಈ ಬಗ್ಗೆ ತಿಳಿದುಕೊಂಡಿದ್ದಾರೆ. ಮನೆಗೆ ಹೋಗಿ ನೋಡಿದಾಗ ಮನೆಯಲ್ಲಿ ರಕ್ತದ ಮಡುವಿನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಮಗಳ ಮೃತದೇಹವನ್ನು ನೋಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿಯ ಖಾಸಗಿ ಭಾಗಗಳು, ತಲೆ ಮತ್ತು ಮುಖದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಅಲ್ಲದೇ ಆಕೆಯ ಬಾಯಿಯಲ್ಲಿ ಸ್ಪ್ಯಾನರ್ ಪತ್ತೆಯಾಗಿದ್ದು, ಅದನ್ನು ನಾವು ವಶಪಡಿಸಿಕೊಂಡಿದ್ದೇವೆ. ಸದ್ಯಕ್ಕೆ ಮನೆಯೊಳಗೆ 12 ವರ್ಷದ ಬಾಲಕಿಯನ್ನು ಅಮಾನುಷವಾಗಿ ಕೊಲೆ ಮಾಡಿರುವ ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಆರ್.ಕೆ.ಪಟೇಲ್ ತಿಳಿಸಿದ್ದಾರೆ.

ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಿಧಿವಿಜ್ಞಾನ ತಜ್ಞರ ತಂಡವೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಪೊಲೀಸರು ಕೂಡ ಸ್ಥಳೀಯರನ್ನು ವಿಚಾರಣೆ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *