ಬಾತ್‍ರೂಮಿನಲ್ಲಿ ಗ್ಯಾಸ್ ಗೀಸರ್ ಲೀಕ್ ಆಗಿ ಹುಟ್ಟುಹಬ್ಬದಂದೇ ಬಾಲಕಿ ಸಾವು

ಮುಂಬೈ: ಬಾತ್‍ರೂಮಿನಲ್ಲಿ ಗೀಸರ್ ಲೀಕ್ ಆಗಿ ಹುಟ್ಟುಹಬ್ಬದಂದೇ ಬಾಲಕಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಧ್ರುವಿ ಗೋಹಿಲಾ(15) ಮೃತಪಟ್ಟ ಬಾಲಕಿ. ಬುಧವಾರ ಬೆಳಗ್ಗೆ ಸುಮಾರು 6.45ಕ್ಕೆ ಧ್ರುವಿ ಸ್ನಾನ ಮಾಡಲು ಹೋಗಿದ್ದಳು. ಒಂದು ಗಂಟೆಯಾದರೂ ಹೊರಬರದ ಕಾರಣ ಪೋಷಕರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದ್ದಾರೆ. ಈ ವೇಳೆ ಧ್ರುವಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಳು. ತಕ್ಷಣ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಧ್ರುವಿಯನ್ನು 24 ಗಂಟೆ ವೆಂಟಿಲೇಟರ್ ನಲ್ಲಿಟ್ಟ ಬಳಿಕ ಆಕೆ ಮೃತಪಟ್ಟಿದ್ದಾಳೆ. ವೈದ್ಯರ ಪ್ರಕಾರ, ಧ್ರುವಿ ಕಾಲು ಬಿಸಿ ನೀರಿನಿಂದ ಸುಟ್ಟು ಹೋಗಿತ್ತು. ಮರಣೋತ್ತರ ವರದಿಯ ಪ್ರಕಾರ ಉಸಿರುಗಟ್ಟಿದ್ದ ಕಾರಣ ಧ್ರುವಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

10ನೇ ತರಗತಿ ಓದುತ್ತಿದ್ದ ಧ್ರುವಿ ತನ್ನ ಹುಟ್ಟುಹಬ್ಬದಂದೇ ಮೃತಪಟ್ಟಿದ್ದಾಳೆ. ಧ್ರುವಿ ಸ್ನಾನ ಮಾಡುತ್ತಿದ್ದ ಬಾತ್‍ರೂಮಿನಲ್ಲಿ ವೆಂಟಿಲೇಶನ್ ಇರಲಿಲ್ಲ. ಅಲ್ಲದೆ ಚಳಿಯಿದ್ದ ಕಾರಣ ಧ್ರುವಿ ಬಾತ್‍ರೂಮಿನ ಬಾಗಿಲನ್ನು ಲಾಕ್ ಮಾಡಿಕೊಂಡಿದ್ದಳು.

ಈ ಬಗ್ಗೆ ಧ್ರುವಿ ತಂದೆ ರಾಜೀವ್ ಪ್ರತಿಕ್ರಿಯಿಸಿ, ನನಗೆ ಇದ್ದಿದ್ದು ಒಬ್ಬಳೇ ಮಗಳು, ಆಕೆಯ ಮೇಲೆ ನನಗೆ ತುಂಬಾ ಭರವಸೆಯಿತ್ತು. ನಾನು ಜನರಿಗೆ ಗ್ಯಾಸ್ ಗೀಸರ್ ಬಳಸದಂತೆ ಸಲಹೆ ನೀಡುತ್ತೇನೆ ಎಂದು ಕಣ್ಣೀರು ಹಾಕಿದರು.

Comments

Leave a Reply

Your email address will not be published. Required fields are marked *