ಯುವತಿಯನ್ನ ಎಳೆದ್ಕೊಂಡು ಚಲಿಸುತ್ತಿದ್ದ ಕಾರಿನಲ್ಲೇ ಗ್ಯಾಂಗ್‍ರೇಪ್

ಶಿಮ್ಲಾ: ಚಲಿಸುತ್ತಿರುವ ಕಾರಿನಲ್ಲಿ 19 ವರ್ಷದ ಯುವತಿಯನ್ನು ಎಳೆದುಕೊಂಡು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಶಿಮ್ಲಾ ಪೊಲೀಸರು (ಎಫ್‍ಐಆರ್) ದಾಖಲಿಸಿಕೊಂಡಿದ್ದು, ಈ ಕುರಿತು ತನಿಖೆ ಮುಂದುವರಿಸಿದ್ದಾರೆ.

ಸಂತ್ರಸ್ತೆ ಧಲ್ಲಿಯಿಂದ ಮಾಲ್ ರಸ್ತೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಳು. ಆಗ ಒಂದು ಕಾರು ಬಂದು ಆಕೆಯನ್ನು ಅಡ್ಡಗಟ್ಟಿದ್ದು, ಆಗ ಕಾಮುಕರು ಕಾರಿನಿಂದ ಇಳಿದು ಸಂತ್ರಸ್ತೆಯನ್ನು ಕಾರಿನೊಳಗೆ ಎಳೆದುಕೊಂಡಿದ್ದಾರೆ. ಬಳಿಕ ಚಲಿಸುತ್ತಿದ್ದ ಕಾರಿನಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಸಂತ್ರಸ್ತೆಯನ್ನು ಸದ್ಯಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪ್ರಕರಣ ಕುರಿತು ತನಿಖೆ ಮಾಡಲು 8 ಮಂದಿಯ ವಿಶೇಷ ತಂಡವನ್ನು ರಚಿಸಲಾಗಿದೆ. ಅವರು ಭಾನುವಾರ ರಾತ್ರಿ ನಡೆದ ಘಟನೆಗಳಿಗೆ ಸಂಬಂಧಿಸಿದ ಸಾಕ್ಷಿ-ಪುರಾವೆಗಳನ್ನು ಸಂಗ್ರಹಿಸಿಸುತ್ತಿದ್ದಾರೆ. ಶೀಘ್ರದಲ್ಲೇ ನಾವು ಈ ಪ್ರಕರಣವನ್ನು ಭೇದಿಸುವ ಭರವಸೆ ಹೊಂದಿದ್ದೇವೆ. ಇದು ಸೂಕ್ಷ್ಮ ವಿಚಾರವಾದ ಕಾರಣದಿಂದಾಗಿ ಹೆಚ್ಚಿನ ಮಾಹಿತಿಯನ್ನು ತಿಳಿಸಲು ಸಾಧ್ಯವಿಲ್ಲ ಎಂದು ಶಿಮ್ಲಾದ ಡಿಎಸ್‍ಪಿ ಪ್ರಮೋದ್ ಶುಕ್ಲಾ ಅವರು ತಿಳಿಸಿದ್ದಾರೆ.

ಸಂತ್ರಸ್ತೆ 2017ರಲ್ಲಿ ಲಾಂಚ್ ಆಗಿದ್ದ ಗುಡಿಯಾ ಹೆಲ್ಪ್ ಲೈನ್ ಮೂಲಕ ಅತ್ಯಾಚಾರ ದೂರನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಐಪಿಸಿ ಸೆಕ್ಸನ್ 376, 354, ಮತ್ತು 506ರ ಅಡಿಯಲ್ಲಿ ಪ್ರಕರಣವನ್ನು ಅಪರಿಚಿತರ ವಿರುದ್ಧ ಧಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *