ಬೆಂಗಳೂರು: ಬುದ್ಧ ಚಿತ್ರಾಲಯ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿರುವ ಗಿಣಿ ಹೇಳಿದ ಕಥೆ ಈ ವಾರದಿಂದ ಶುರುವಾಗಲಿದೆ. ಶುದ್ಧ ಕನ್ನಡತನದ ಶೀರ್ಷಿಕೆ ಮತ್ತು ಹೊಸ ಬಗೆಯ ಕಥೆಯ ಹೊಳಹಿನಿಂದ ಈಗಾಗಲೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ. ಅದುವೇ ಹೊಸ ಪ್ರಯತ್ನವೊಂದರ ಗೆಲುವಿನ ಹೆಜ್ಜೆಯಾಗಿಯೂ ಗೋಚರವಾಗುತ್ತಿದೆ.
ಈ ವಾರ ಗಿಣಿ ಹೇಳ ಹೊರಟಿರೋದು ಪಕ್ಕಾ ಭಿನ್ನವಾದ ಕಥೆ. ಹಾಗಂತ ಇದು ಕಲಾತ್ಮಕ ಚಿತ್ರ ಅಂದುಕೊಳ್ಳಬೇಕಿಲ್ಲ. ಆದರೆ ಸಿದ್ಧ ಸೂತ್ರಗಳ ಕಮರ್ಶಿಯಲ್ ಚೌಕಟ್ಟೂ ಕೂಡಾ ಇದಕ್ಕಿಲ್ಲ. ನಮ್ಮ ನಡುವಿನ ಪಾತ್ರಗಳೇ ತೆರೆ ಮೇಲೆ ಕದಲುತ್ತಿವೆ, ನಮ್ಮದೇ ಮಾತುಗಳಿಗೆ ಆ ಪಾತ್ರಗಳು ಬಾಯಾಗಿವೆ ಎಂಬಂಥಾ ವಿಶಿಷ್ಟವಾದ ಫೀಲ್ ಹುಟ್ಟಿಸೋ ರೀತಿಯಲ್ಲಿ ಇಡೀ ಸಿನಿಮಾ ರೂಪುಗೊಂಡಿದೆಯಂತೆ.

ಅದು ಯಾವ ವಿಚಾರವೇ ಆಗಿರಬಹುದು. ನೇರಾ ನೇರ ಮುಖಕ್ಕೆ ಹೊಡೆದಂತೆ ಹೇಳೋದರಿಂದ ಘರ್ಷಣೆ, ವೈಮನಸ್ಯದ ಹೊರತಾಗಿ ಬೇರ್ಯಾವ ಪ್ರಯೋಜನವೂ ಆಗೋದಿಲ್ಲ. ಅದನ್ನೇ ಕೂಲಾಗಿ, ತಮಾಷೆಯಾಗಿ ಹೇಳಿದರೆ ಅದರ ಎಫೆಕ್ಟೇ ಬೇರೆ. ಅಂಥಾದ್ದೊಂದು ಸೂತ್ರದಿಂದ ಗಂಭೀರವಾದ ವಿಚಾರವನ್ನೂ ಕೂಡಾ ಲಘುವಾದ ಶೈಲಿಯಲ್ಲಿ ಇಲ್ಲಿ ಹೇಳಲಾಗಿದೆ. ಮನರಂಜನೆಯನ್ನೇ ಮುಖ್ಯ ಉದ್ದೇಶವಾಗಿಸಿಕೊಂಡಿರೋ ಈ ಚಿತ್ರ ಪ್ರೇಕ್ಷಕರ ಪಾಲಿಗೆ ಹೊಸ ವರ್ಷಾರಂಭದಲ್ಲಿಯೇ ಮಧುರಾನುಭೂತಿ ನೀಡಲಿರೋದಂತೂ ನಿಜ.
ದೇವ್ ರಂಗಭೂಮಿ ಈ ಚಿತ್ರದ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ಮಾಣವನ್ನೂ ಮಾಡಿದ್ದಾರೆ. ನಾಯಕನಾಗಿಯೂ ನಟಿಸಿದ್ದಾರೆ. ಇವರಿಗಿಲ್ಲಿ ಗುಂಗುರು ಕೂದಲ ಚೆಲುವೆ ಗೀತಾಂಜಲಿ ನಾಯಕಿಯಾಗಿ ಜೊತೆಯಾಗಿದ್ದಾರೆ. ಗಿಣಿ ಹೇಳಿದ ಕಥೆಯ ಬಗ್ಗೆ ಪ್ರೇಕ್ಷಕರಲ್ಲೊಂದು ಕಲ್ಪನೆ ಇದೆಯಲ್ಲಾ? ಅದನ್ನೂ ಮೀರಿದ ಸೊಗಸನ್ನು ಈ ಚಿತ್ರ ತುಂಬಿಕೊಂಡಿದೆ. ಅಂತೂ ಈ ವರ್ಷದ ಆರಂಭದಲ್ಲಿಯೇ ಹೊಸ ಅಲೆಯ ಚಿತ್ರವೊಂದು ಗೆದ್ದು ಸದ್ದು ಮಾಡೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply