ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ರೇಟಿಂಗ್ ನಲ್ಲಿ ಮೋದಿಗೆ 3ನೇ ಸ್ಥಾನ

– 2015ರ ಸಮೀಕ್ಷೆಯಲ್ಲಿ 5ನೇ ಸ್ಥಾನದಲ್ಲಿದ್ದ ಮೋದಿ ಈ ಬಾರಿ ಮೂರರಲ್ಲಿ
– ಪುಟಿನ್, ಟ್ರಂಪ್ ರನ್ನ ಹಿಂದಿಕ್ಕಿದ ಮೋದಿ, ಪಾತಾಳಕ್ಕೆ ಕುಸಿದ ಟ್ರಂಪ್
– ಮೋದಿಯನ್ನ ದ್ವೇಷಿಸುವ ದೇಶಗಳಲ್ಲಿ ಪಾಕಿಸ್ತಾನ ಮೊದಲ ಸ್ಥಾನ
– ಫಾರಿನ್ ಪ್ರವಾಸದಿಂದಲೂ ಆಗಿದೆ ಪರಿಣಾಮ

ನವದೆಹಲಿ: ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ಶ್ರೇಯಾಂಕದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮೂರನೇ ಸ್ಥಾನ ಪಡೆದಿದ್ದಾರೆ.

ಪ್ರತಿಷ್ಠಿತ ಗ್ಯಾಲಪ್ ಅಂತರಾಷ್ಟ್ರೀಯ ವಾರ್ಷಿಕ ಸಮೀಕ್ಷೆಯಾದ ಒಪೀನಿಯನ್ ಆಫ್ ಗ್ಲೋಬಲ್ ಲೀಡರ್ಸ್ ನಲ್ಲಿ ಮೋದಿ ವಿಶ್ವದ ಮೂರನೇ ಅತ್ಯಂತ ಜನಪ್ರಿಯ ನಾಯಕ ಎನಿಸಿಕೊಂಡಿದ್ದಾರೆ. ಸ್ವಿಜರ್ಲ್ಯಾಂಡ್ ನ ಗ್ಯಾಲಪ್ ಇಂಟರ್‍ನ್ಯಾಷನಲ್ ಅಸೋಸಿಯೇಷನ್ ಹಾಗೂ ಸಿ-ವೋಟರ್ ಸಹಯೋಗದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ವಿಶ್ವದಾದ್ಯಂತ 55 ರಾಷ್ಟ್ರಗಳಲ್ಲಿ 53,769 ಜನರನ್ನ ಸಂದರ್ಶನ ಮಾಡಿ ಈ ಸಮೀಕ್ಷಾ ವರದಿ ನೀಡಲಾಗಿದೆ.

ಚೀನಾ ಅಧ್ಯಕ್ಷ ಕ್ಸೀ ಜಿನ್‍ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂತಾದ ನಾಯಕರನ್ನ ಹಿಂದಿಕ್ಕಿ ಮೋದಿ ಮೂರನೇ ಸ್ಥಾನದಲ್ಲಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಟಾಪ್ ಒಂದನೇ ಸ್ಥಾನ ಪಡೆದಿದ್ದು, ನೂತನ ಫ್ರೆಂಚ್ ಅಧ್ಯಕ್ಷ ಇಮ್ಮ್ಯಾನುವಲ್ ಮ್ಯಾಕ್ರನ್ ಎರಡನೇ ಸ್ಥಾನ ಪಡೆದು ಮೋದಿಗಿಂತ ಮುಂದಿದ್ದಾರೆ. ಈ ಸಮೀಕ್ಷೆಯಲ್ಲಿ ಈವರೆಗೆ ಭಾರತೀಯ ಪ್ರಧಾನಿಗೆ ಸಿಕ್ಕ ಅತ್ಯಂತ ಹೆಚ್ಚಿನ ಶ್ರೇಯಾಂಕ ಇದಾಗಿದೆ ಎಂದು ವರದಿಯಾಗಿದೆ.

 

2015ರಲ್ಲಿ ನಡೆದ ಸಮೀಕ್ಷೆಯಲ್ಲಿ ಮೋದಿ 5ನೇ ಸ್ಥಾನದಲ್ಲಿದ್ದರು. ಈ ವೇಳೆ ಅವರ ನೆಟ್ ಸ್ಕೋರ್ (ಪಾಸಿಟಿವ್ ರೇಟಿಂಗ್ 24ನಿಂದ ನೆಗೆಟೀವ್ ರೇಟಿಂಗ್ 20 ಕಳೆದಾಗ) 4 ಇತ್ತು. ಈ ವರ್ಷ ಅದು ದುಪ್ಪಟ್ಟಾಗಿದ್ದು ನೆಟ್ ಸ್ಕೋರ್ 8 ಸಿಕ್ಕಿದೆ.

ಮೋದಿಯ ನಂತರ ಬ್ರಿಟನ್ ಪ್ರಧಾನಿ ಥೆರೆಸಾ ಮೇ ನಾಲ್ಕನೇ ಸ್ಥಾನ, ಚೀನಾ ಅಧ್ಯಕ್ಷ ಜಿನ್‍ಪಿಂಗ್ ಐದನೇ ಸ್ಥಾನ, ರಷ್ಯಾ ಅಧ್ಯಕ್ಷ ಪುಟಿನ್ ಆರನೇ ಸ್ಥಾನ ಹಾಗೂ ಸೌದಿ ದೊರೆ ಸಲ್ಮಾನ್ ಅಬ್ದುಲ್ ಅಜೀಜ್ ಅಲ್ ಸೌ ಏಳನೇ ಸ್ಥಾನದಲ್ಲಿದ್ದಾರೆ. ಇಸ್ರೇಲ್‍ನ ಬೆಂಜಮಿನ್ ನೇತನ್ಯಾಹು ಎಂಟನೇ ಸ್ಥಾನದಲ್ಲಿದ್ದರೆ, ಇರಾನ್ ಅಧ್ಯಕ್ಷ ಹಸನ್ ರೌಹಾನಿ ಒಂಭತ್ತನೇ ಸ್ಥಾನದಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾತಾಳಕ್ಕೆ ಕುಸಿದಿದ್ದು 11ನೇ ಸ್ಥಾನ ಪಡೆದಿದ್ದಾರೆ. ಎರಡು ವರ್ಷಗಳ ಹಿಂದಿನ ಸಮೀಕ್ಷೆಯಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದರು. ಟ್ರಂಪ್‍ಗಿಂತ ಮುಂಚೂಣಿಯಲ್ಲಿರೋ ಟರ್ಕಿ ಅಧ್ಯಕ್ಷ ಎರ್ಡೋಗನ್ 10ನೇ ಸ್ಥಾನ ಪಡೆದಿದ್ದಾರೆ. ಆಶ್ಚರ್ಯವೆಂದರೆ ಧಾರ್ಮಿಕ ನಾಯಕರಾದ ಪೋಪ್ ಫ್ರಾನ್ಸಿಸ್ 38 ನೆಟ್ ಸ್ಕೋರ್ ಪಡೆದಿದ್ದಾರೆ.

ಮೋದಿಯನ್ನ ಪ್ರೀತಿಸೋ ದೇಶಗಳು: ವಿಯಾಟ್ನಾಮ್, ಫಿಜಿ ಹಾಗೂ ಅಫ್ಘಾನಿಸ್ತಾನ ಮೋದಿಯನ್ನ ಇಷ್ಟಪಡುವ ಟಾಪ್ ಮೂರು ದೇಶಗಳು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ 2015ರಲ್ಲಿ ವಿಯೆಟ್ನಾಂ ನಲ್ಲಿ ಮೋದಿಯನ್ನ ಇಷ್ಟಪಡುವವರ ನೆಟ್ ಸ್ಕೋರ್ 9 ಇದ್ದಿದ್ದು, 2017ರ ಪಟ್ಟಿಯಲ್ಲಿ ಬರೋಬ್ಬರಿ 62ಕ್ಕೆ ಏರಿದೆ.

ಮೋದಿಯನ್ನ ದ್ವೇಷಿಸೋ ದೇಶಗಳು: ಮೋದಿಯನ್ನು ದ್ವೇಷಿಸುವ ರಾಷ್ಟ್ರಗಳಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. 2015ರಲ್ಲಿ ನೆಟ್ ಸ್ಕೋರ್ – 43 ಇದ್ದರೆ 2017ರಲ್ಲಿ ನೆಟ್ ಸ್ಕೋರ್ -54ಕ್ಕೆ ಏರಿದೆ. ಮೋದಿಯನ್ನು ದ್ವೇಷಿಸುವ ಎರಡನೇ ದೇಶ ದಕ್ಷಿಣ ಕೊರಿಯಾ ಹಾಗೂ ಮೂರನೇ ದೇಶ ಪ್ಯಾಲೆಸ್ಟೀನ್ ಆಗಿದೆ.

ಜಿ8 ರಾಷ್ಟ್ರಗಳಲ್ಲಿ ಮೋದಿ ಜನಪ್ರಿಯತೆ ಹೇಗಿದೆ?: ಜಿ8 ರಾಷ್ಟ್ರಗಳಾದ ರಷ್ಯಾ, ಅಮೆರಿಕ, ಕೆನಡಾ, ಇಂಗ್ಲೆಂಡ್, ಜಪಾನ್, ಫ್ರಾನ್ಸ್, ಜರ್ಮನಿ ಹಾಗೂ ಇಟಲಿ ದೇಶಗಳ ನಡುವೆ ಮೋದಿಯ ಜನಪ್ರಿಯತೆ ಸರಾಸರಿ 4 ಅಂಕಗಳಷ್ಟು ಕಡಿಮೆಯಾಗಿದೆ. 2015ರಲ್ಲಿ ರಷ್ಯಾದಲ್ಲಿ ಮೋದಿಯ ಫೇವರೆಬಿಲಿಟಿ 47 ಅಂಕ ಇದ್ದರೆ 2017ರಲ್ಲಿ 16ಕ್ಕೆ ಇಳಿದಿದೆ. ಅದರಲ್ಲೂ ರಷ್ಯಾಗೆ ಮೋದಿ ನಾಲ್ಕು ಬಾರಿ ಭೇಟಿ ನೀಡಿದ ಹೊರತಾಗಿಯೂ -31 ಸ್ಕೋರ್ ಸಿಕ್ಕಿದೆ. ಅಮೆರಿಕ, ಇಂಗ್ಲೆಂಡ್, ಇಟಲಿ ಹಾಗೂ ಜಪಾನ್‍ನಲ್ಲಿ ಮೋದಿಯ ಫೇವರೆಬಿಲಿಟಿ ಕ್ರಮವಾಗಿ ಮೂರು, ನಾಲ್ಕು, ಒಂದು ಹಾಗೂ ಒಂದು ಅಂಕಗಳಷ್ಟು ಹೆಚ್ಚಿದೆ. ಕೆನಡಾದಲ್ಲಿ ಯಾವುದೇ ಬದಲಾವಣೆ ಇಲ್ಲ.

ಸಾರ್ಕ್ ದೇಶಗಳಲ್ಲಿ ಮೋದಿ ಜನಪ್ರಿಯತೆ ಹೇಗಿದೆ?: ಸಾರ್ಕ್ ದೇಶಗಳಾದ ಅಫ್ಘಾನಿಸ್ತಾನ, ಬಂಗ್ಲಾದೇಶ ಹಾಗೂ ಪಾಕಿಸ್ತಾನದ ಪೈಕಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ನೆಟ್ ಸ್ಕೋರ್ ಕಡಿಮೆಯಾಗಿದೆ. ಅದರಲ್ಲೂ ಬಾಂಗ್ಲೇದೇಶದಲ್ಲಿ ಕಳೆದ ಸಮೀಕ್ಷೆಯಲ್ಲಿ 50 ಇದ್ದ ನೆಟ್ ಸ್ಕೋರ್ 13ಕ್ಕೆ ಕುಸಿದಿದೆ. ಅಫ್ಘಾನಿಸ್ತಾನದಲ್ಲಿ 3 ಅಂಕ ಹೆಚ್ಚಿದೆ.

ಬ್ರಿಕ್ಸ್ ರಾಷ್ಟ್ರಗಳಲ್ಲಿ ಹೇಗಿದೆ ಮೋದಿ ಹವಾ?: ಬ್ರಿಕ್ಸ್ ರಾಷ್ಟ್ರಗಳಾದ ರಷ್ಯಾ, ದಕ್ಷಿಣ ಆಫ್ರಿಕಾ, ಚೀನಾ, ಬ್ರೆಜಿಲ್ ಪೈಕಿ ಮೋದಿಯ ಒಟ್ಟಾರೆ ಸ್ಕೋರ್‍ನಲ್ಲಿ(ಭಾರತದ 6 ಅಂಕ ಸರಿದೂಗಿಸಿಯೂ) 2 ಅಂಕ ಕಡಿಮೆಯಾಗಿದೆ. ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕ್ರಮವಾಗಿ 12 ಹಾಗೂ 2 ಅಂಕಗಳು ಹೆಚ್ಚಾಗಿದೆ. ಚೀನಾದಲ್ಲಿ ಯಾವುದೇ ಬದಲಾವಣೆ ಇಲ್ಲ.

ವಿದೇಶಿ ಪ್ರವಾಸ ಎಫೆಕ್ಟ್: ಮೋದಿ ಭೇಟಿ ನೀಡಿದ ರಾಷ್ಟ್ರಗಳ ಪೈಕಿ ಮೆಕ್ಸಿಕೋ ಹಾಗೂ ಟರ್ಕಿಯಲ್ಲಿ ಗುಣಾತ್ಮಕ ಬದಲಾವಣೆ ಆಗಿದೆ. ಮೆಕ್ರಿಕೋದ ನೆಟ್ ಸ್ಕೋರ್ -1 ರಿಂದ 31ಕ್ಕೆ ಜಿಗಿದಿದ್ದರೆ, ಟರ್ಕಿಯಲ್ಲಿ -4ರಿಂದ 10ಕ್ಕೆ ಏರಿದೆ. ಆದ್ರೆ ಆಶ್ಚರ್ಯವೆಂಬಂತೆ ನೆದರ್‍ಲೆಂಡ್ಸ್ ಹಾಗೂ ಕೊರಿಯಾದಲ್ಲಿ ಮೋದಿ ಭೇಟಿ ಹೊರತಾಗಿಯೂ ಅವರ ಜನಪ್ರಿಯತೆ ಕ್ಷೀಣಿಸಿದೆ.

ಭಾರತೀಯರು ಟಾಪ್ 10 ಲೀಡರ್‍ಗಳನ್ನ ಹೇಗೆ ರೇಟ್ ಮಾಡಿದ್ದಾರೆ?: ಭಾರತದಲ್ಲಿ ಮೋದಿಯ ಪಾಸಿಟೀವ್ ಸ್ಕೋರ್ 85, ನೆಗೆಟೀವ್ ಸ್ಕೋರ್ 14 ಇದ್ದರೆ ನೆಟ್ ಸ್ಕೋರ್ 71 ಇದೆ. 2015ರ ಸಮೀಕ್ಷೆಗೆ ಹೋಲಿಸಿದ್ರೆ ನೆಟ್ ಸ್ಕೋರ್ 61 ಇದ್ದಿದ್ದು 71ಕ್ಕೆ ಏರಿದೆ. ಸಮೀಕ್ಷೆಯ ವರದಿಯನ್ನ ಪಕ್ಕಕ್ಕಿಟ್ಟರೆ ಭಾರತೀಯರು ತಮ್ಮದೇ ರೀತಿಯಲ್ಲಿ ಇತರೆ ಟಾಪ್ 10 ನಾಯಕರನ್ನ ರೇಟ್ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಸಮೀಕ್ಷೆಯಲ್ಲಿಯೂ ಬರಾಕ್ ಒಬಾಮಾಗೆ ಭಾರತೀಯರು ಮೊದಲ ಸ್ಥಾನ ನೀಡಿದ್ದರು. ಈ ಬಾರಿಯ ಸಮೀಕ್ಷೆಯಲ್ಲಿ ಪುಟಿನ್ ಎರಡನೇ ಸ್ಥಾನ ಹಾಗೂ ಏಂಜೆಲಾ ಮರ್ಕೆಲ್ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಚೀನಾದ ಕ್ಸೀ ಜಿನ್‍ಪಿಂಗ್ ಕೊನೆಯ ಸ್ಥಾನ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *