ನಮಗೆ ಮನೆ ಕಟ್ಟಿಸಿ ಕೊಡಿ- ಘಟಪ್ರಭಾ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಂದ ಪ್ರತಿಭಟನೆ

ಬೆಳಗಾವಿ: ಗೋಕಾಕ್ ತಾಲೂಕಿನ ಅರಭಾವಿ ಕ್ಷೇತ್ರದಲ್ಲಿ 2019ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈವರೆಗೆ ಸರ್ಕಾರ ಮನೆ ಕಟ್ಟಿ ಕೊಟ್ಟಿಲ್ಲ. ಇದರಿಂದ ಆಕ್ರೋಶಗೊಂಡಿರುವ ಸಂತ್ರಸ್ತರು ಬುತ್ತಿ ಕಟ್ಟಿಕೊಂಡು ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ನಮಗೆ ಮನೆ ಕಟ್ಟಿಸಿಕೊಡುವ ಆದೇಶ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಅರಭಾವಿ ಕ್ಷೇತ್ರದ ಅಡಿಬಟ್ಟಿ, ಚಿಗಡೊಳ್ಳಿ, ಮೇಳವಂಕಿ, ಹಡಗಿನಾಳ, ಉದಗಟ್ಟಿ, ತಿಗಡಿ, ಮಸಗುಪ್ಪಿ, ಕಲಾರಕೊಪ್ಪ, ಅಳ್ಳಿಮಟ್ಟಿ, ಸುಣಧೋಳಿ, ಢವಳೇಶ್ವರ, ಮುನ್ಯಾಳ, ಕಮಲದಿನ್ನಿ, ರಂಗಾಪುರ ಸೇರಿದಂತೆ ಘಟಪ್ರಭಾ ನದಿ ದಂಡೆಯ ಹಲವು ಹಳ್ಳಿಗಳ 200ಕ್ಕೂ ಹೆಚ್ಚು ಸಂತ್ರಸ್ತರು ಬುಧವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ, ಡಿಸಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು. ಮನೆ ಕಟ್ಟಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ 500ಕ್ಕೂ ಹೆಚ್ಚು ಸೈಕಲ್‍ಗಳಲ್ಲಿ ರಸ್ತೆಗಿಳಿದ ಜೆಡಿಎಸ್ ಕಾರ್ಯಕರ್ತರು

ಈ ವೇಳೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಮಾತನಾಡಿ, 2019ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಅರಭಾವಿ ಕ್ಷೇತ್ರದ ಜನತೆಗೆ ಮನೆ ಪರಿಹಾರ ಕೊಟ್ಟಿಲ್ಲ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಮನೆಗಳಿಗೆ ಪರಿಹಾರ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಪ್ರತ್ಯಕ್ಷವಾಗಿ ಪ್ರವಾಹಕ್ಕೆ ಹಾನಿಯಾದ ಮನೆಗಳಿಗೆ ಭೇಟಿ ನೀಡಿ, ಸತ್ಯಾಸತ್ಯತೆ ಪರಿಶೀಲನೆ ನಡೆಸಬೇಕು. ಮನೆಗಳ ನಿರ್ಮಾಣದ ಆದೇಶ ಬರುವವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಬಿಟ್ಟು ಹೋಗುವುದಿಲ್ಲ. ಬುತ್ತಿ ಕಟ್ಟಿಕೊಂಡೇ ಬಂದಿದ್ದೇವೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *