ಹಾಸನ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಪ್ರಧಾನಿ ಮೋದಿ ಸಂತಾಪ

-ಮೃತರ ಕುಟುಂಬಸ್ಥರಿಗೆ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಣೆ

ನವದೆಹಲಿ: ಹಾಸನದಲ್ಲಿ (Hassan) ಗಣೇಶ ಮೆರವಣಿಗೆ ವೇಳೆ ಸಂಭವಿಸಿದ ಘನಘೋರ ದುರಂತದಲ್ಲಿ ಮೃತಪಟ್ಟವರ ನೆನೆದು ಪ್ರಧಾನಿ ನರೇಂದ್ರ ಮೋದಿ (PM Modi) ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಪ್ರಧಾನಿ ಕಚೇರಿ (PMO) ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಸಂಭವಿಸಿರುವುದು ನಿಜಕ್ಕೂ ಹೃದಯವಿದ್ರಾವಕ ಘಟನೆ. ಈ ದುರಂತದಲ್ಲಿ ಹಲವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅವರ ಬಗ್ಗೆ ಕನಿಕರವಿದೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹಾಸನ ಗಣೇಶ ಮೆರವಣಿಗೆ ವೇಳೆ ದುರಂತ – ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವಿದ್ಯಾರ್ಥಿ ದುರ್ಮರಣ

ಇದೇ ವೇಳೆ ಮೃತರ ಕುಟುಂಬಸ್ಥರಿಗಾಗಿ ಪಿಎಂಎನ್‌ಆರ್‌ಎಫ್ ನಿಧಿಯಿಂದ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಹಣವನ್ನು ಘೋಷಿಸಿದ್ದಾರೆ.

ಏನಿದು ಘನಘೋರ ದುರಂತ?
ಹಾಸನದಿಂದ ಹೊಳೆನರಸೀಪುರದ ಕಡೆಗೆ ಮಹಾರಾಷ್ಟ್ರಕ್ಕೆ ಸೇರಿದ ಟ್ರಕ್ ಹೋಗುತ್ತಿತ್ತು. ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ವಾಹನ ನುಗ್ಗಿದೆ. ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಾಲಕ ಭುವನೇಶ್‌ಗೆ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಗಾಯಗೊಂಡ ಹೊಳೆನರಸೀಪುರ ತಾಲ್ಲೂಕಿನ ಕಟ್ಟೆಬೆಳಗುಲಿಯ ಚಾಲಕ ಭುವನೇಶ್‌ನನ್ನು ಹಾಸನದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿಸಿ ಲತಾ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇದನ್ನೂ ಓದಿ: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ