ಚೀನಾವನ್ನ ಎದುರಿಸಬೇಕಾದ್ರೆ ಭಾರತ-ಅಮೆರಿಕ ಸಂಬಂಧವನ್ನ ಹಳಿಗೆ ತನ್ನಿ – ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಮತ್ತೆ ಎಚ್ಚರಿಕೆ

ವಾಷಿಂಗ್ಟನ್: ಜಾಗತೀಕ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಬೇಕಾದ್ರೆ, ಚೀನಾವನ್ನ ಎದುರಿಸಬೇಕಾದ್ರೆ ಭಾರತ ಮತ್ತು ಅಮೆರಿಕ (India – USA) ಸಂಬಂಧವನ್ನ ಹಳಿಗೆ ತನ್ನಿ ಎಂದು ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ (Nikki Haley) ಟ್ರಂಪ್‌ಗೆ ಮತ್ತೆ ಎಚ್ಚರಿಕೆ ನೀಡಿದ್ದಾರೆ.

ರಷ್ಯಾದ ತೈಲ ಖರೀದಿಸುತ್ತಿರುವ (Russian Oil Trade) ಭಾರತದ ಮೇಲೆ 50% ಸುಂಕ ವಿಧಿಸಿರುವ ಸಂಬಂಧ ʻನ್ಯೂಸ್ ವೀಕ್’ ನಲ್ಲಿ ಬರೆದ ತಮ್ಮ ಲೇಖನದಲ್ಲಿ ಈ ನಿಲುವನ್ನು ಪ್ರತಿಪಾದಿಸಿದ್ದಾರೆ. ಭಾರತವನ್ನು ಅಮೂಲ್ಯವಾದ ಮುಕ್ತ ಮತ್ತು ಪ್ರಜಾಪ್ರಭುತ್ವ ಪಾಲುದಾರನಂತೆ ಪರಿಗಣಿಸಬೇಕೇ ಹೊರತು ಚೀನಾದಂತೆ ಎದುರಾಳಿಯನ್ನಾಗಿ ಅಲ್ಲ ಎಂದು ಒತ್ತಿ ಹೇಳಿದ್ದಾರಲ್ಲದೇ ಭಾರತದ ಸಂಬಂಧ ಕಡಿತಗೊಳಿಸುವುದು ಕಡಿತಗೊಳಿಸುವುದು ಕಾರ್ಯತಂತ್ರದ ವಿಪತ್ತು ಎಂದು ಬಣ್ಣಿಸಿದ್ದಾರೆ.

ಚೀನಾ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದ್ದರೂ ಈವರೆಗೆ ಯಾವುದೇ ಪ್ರಮುಖ ನಿರ್ಬಂಧಗಳನ್ನ ಎದುರಿಸುತ್ತಿಲ್ಲ. ಹೀಗಿರುವಾಗ ಭಾರತವನ್ನ ಶಿಕ್ಷಿಸುವುದು ಅಮೆರಿಕದ ಏಷ್ಯಾ ಕಾರ್ಯತಂತ್ರವನ್ನ ದುರ್ಬಲಗೊಳಿಸಬಹುದು. ಹಾಗಾಗಿ ಭಾರತ ಸಂಬಂಧವನ್ನು ಉಳಿಸಿಕೊಂಡರೆ, ಅಮೆರಿಕದ ಪೂರೈಕೆ ಸರಪಳಿಯನ್ನು ಚೀನಾದಿಂದ ಬೇರ್ಪಡಿಸಲು ಸಹಾಯವಾಗುತ್ತೆ. ಜವಳಿ, ಅಗ್ಗದ ಮೊಬೈಲ್ ಫೋನ್‌ಗಳು ಮತ್ತು ಸೌರ ಫಲಕಗಳ ದೊಡ್ಡ ಪ್ರಮಾಣದ ಉತ್ಪಾದನೆಯಲ್ಲಿ ಪ್ರಮುಖ ಪಾಲುದಾರನಾಗಬಹುದು ಎಂದು ಬರೆದಿದ್ದಾರೆ.

ರಷ್ಯಾದ ತೈಲ ಖರೀದಿ ಮೂಲಕ ಭಾರತ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಫಂಡಿಂಗ್‌ ಮಾಡುತ್ತಿದೆ ಅನ್ನೋದು ಟ್ರಂಪ್‌ ನಂಬಿಕೆಯಾಗಿದೆ. ಭಾರತ-ಪಾಕಿಸ್ತಾನ ಕದನ ವಿರಾಮ ಮಾತುಕತೆಯಲ್ಲಿ ಅಮೆರಿಕದ ಪಾತ್ರವು ಪ್ರಶ್ನಾರ್ಹವಾದಾಗ ಈ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಅಮೆರಿಕ ಮುಂದೆ ಜಾಗತೀಕ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಲು ಬಯಸಿದ್ರೆ, ಟ್ರಂಪ್‌ (Donald Trump) ವಿದೇಶಾಂಗ ನೀತಿಯ ಗುರಿಗಳನ್ನು ಸಾಧಿಸಬೇಕಾದ್ರೆ, ಚೀನಾವನ್ನು ಸೋಲಿಸಬೇಕಾದ್ರೆ ಮತ್ತು ತನ್ನ ಬಲದಿಂದ ಶಾಂತಿ ಸಾಧಿಸಬೇಕಾದ್ರೆ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮೊದಲಿನಂತೆ ಉಳಿಸಿಕೊಳ್ಳುವುದು ನಿರ್ಣಾಯಕವಾಗಿದೆ ಎಂದು ತಿಳಿಸಿದ್ದಾರೆ.

ಭಾರತಕ್ಕಿಂತ ಪಾಕ್‌ಗೆ ಕಡಿಮೆ ಸುಂಕ
ಈಗಾಗಲೇ ಆಗಸ್ಟ್‌ 7ರಿಂದ ಅನ್ವಯವಾಗುವಂತೆ `ಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳಿಗೂ ಶೇ.25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ. ಆದ್ರೆ ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ್ದಾರೆ. ಬೃಹತ್‌ ಪ್ರಮಾಣದಲ್ಲಿ ರಷ್ಯಾದ ಸೇನಾ ಉಪಕರಣಗಳು, ಕಚ್ಚಾ ತೈಲ ಖರೀದಿಸುತ್ತಿರುವ ಭಾರತದ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದರು. ಆ ಬಳಿಕ ಭಾರತದ ಮೇಲೆ 50% ಸುಂಕ ವಿಧಿಸಿದ್ದು, ಈ ನೀತಿಯು ಇದೇ ಆಗಸ್ಟ್‌ 27ರಿಂದ ಅನ್ವಯವಾಗಲಿದೆ.