ಮಸೀದಿಗೆ ಭೇಟಿ ನೀಡಿ ಭಾವೈಕ್ಯತೆ ಮೆರೆದ ಕೊಪ್ಪಳ ಗವಿಶ್ರೀ

ಕೊಪ್ಪಳ: ಗವಿಮಠದ ಪೀಠಾಧಿಪತಿ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ಯಾವಾಗಲೂ ಇತರ ಸ್ವಾಮೀಜಿಯವರಿಗಿಂತ ಭಿನ್ನವಾಗಿಯೇ ಕೆಲಸ ಮಾಡುತ್ತಾರೆ. ಇದೀಗ ಅಂತಹುದೇ ವಿಭಿನ್ನ ಕೆಲಸವೊಂದನ್ನು ಮಾಡಿದ್ದಾರೆ.

ಈ ಬಾರಿ ಗವಿಸಿದ್ದೇಶ್ವರ ಸ್ವಾಮೀಜಿ ಮಸೀದಿಗೆ ಭೇಟಿ ನೀಡುವ ಮೂಲಕ ತಾವು ಇತರರಿಗಿಂತ ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದು ಒಂದು ರೀತಿಯಲ್ಲಿ ಇಡೀ ಸಮಾಜಕ್ಕೆ ಮಾದರಿ ಹಾಗೂ ಭಾವೈಕ್ಯತೆ ಸಾರುವಂತಹ ಕೆಲಸವಾಗಿದೆ. ಇದನ್ನೂ ಓದಿ: ಅಮ್ಮನ ಬಗ್ಗೆ ಅಪ್ಪು ಮಾತನಾಡಿದ್ದ ಸ್ಫೂರ್ತಿದಾಯಕ ಮಾತುಗಳು ವೈರಲ್

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲ ಕುಂಟಾ ಗ್ರಾಮದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ. ಈ ಮಧ್ಯೆ ಪ್ರತಿದಿನ ಒಂದೊಂದು ಹಳ್ಳಿಯಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ ಪಾದಯಾತ್ರೆ ಮಾಡುತ್ತಿದ್ದಾರೆ. ಇಂದು ಗವಿಸಿದ್ದೇಶ್ವರ ಸ್ವಾಮೀಜಿ ಹಿರೇವಂಕಲ ಕುಂಟಾ ಗ್ರಾಮದ ಜುಮ್ಮಾ ಮಸೀದಿಗೆ ಭೇಟಿ ನೀಡಿ ಸೌಹಾರ್ದತೆ ಮೆರೆದಿದ್ದಾರೆ.

ಮಸೀದಿಗೆ ಭೇಟಿ ನೀಡಿದ್ದ ವೇಳೆ ಗವಿಸಿದ್ದೇಶ್ವರ ಸ್ವಾಮೀಜಿಗೆ ಮುಸ್ಲಿಂ ಸಮುದಾಯದವರು ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಗವಿಸಿದ್ದೇಶ್ವರ ಸ್ವಾಮೀಜಿ, ಭೂಮಿಯ ಮೇಲೆ ಬದುಕಿರುವ ಜೀವರಾಶಿಗಳಲ್ಲಿ ಮಾನವೀಯತೆ ಅತ್ಯಂತ ಶ್ರೇಷ್ಠವಾದದ್ದು. ಮನುಷ್ಯನಲ್ಲಿ ಭೇದ-ಭಾವ ಇರಬಾರದು. ಸದಾ ಒಳ್ಳೆಯ ಕಾರ್ಯಗಳಲ್ಲಿ ತೊಡಗಬೇಕು ಎಂದರು.

ಮನುಷ್ಯರಾದವರು ಸದಾ ತ್ಯಾಗದಲ್ಲಿ ತೊಡಗಿರಬೇಕು. ದಯಾ-ಕರುಣೆಯಿಂದ ಬಾಳಿದರೆ ಅದುವೇ ಸ್ವರ್ಗ. ಕೆಲವು ದಿನಗಳ ಹಿಂದೆ ದೇಶದಲ್ಲಿ ಭೇದ-ಭಾವ ಹರಡುವ ವಾತಾವರಣ ಇತ್ತು. ಈ ರೀತಿಯ ಬೆಳವಣಿಗೆಗೆ ಅವಕಾಶ ಕೊಡದೇ ಪ್ರತಿಯೊಬ್ಬರೂ ಸಹೋದರರಂತೆ ಜೀವಿಸಬೇಕೆಂದು ಕರೆ ನೀಡಿದರು. ಇದನ್ನೂ ಓದಿ:  88 ವರ್ಷಗಳ ಕನ್ನಡ ಚಿತ್ರರಂಗದ ಎಲ್ಲ ದಾಖಲೆ ಮುರಿದ ಜೇಮ್ಸ್ : 100 ಕೋಟಿ, ಅಧಿಕೃತ ಹೇಳಿಕೆ

ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮಗಳ ವಿಚಾರವಾಗಿ ಗಲಭೆಗಳಾಗುತ್ತಿದ್ದು, ಇದೇ ಸಂದರ್ಭದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ ಹಿರೇವಂಕಲ ಕುಂಟಾದ ಜುಮ್ಮಾ ಮಸೀದಿಗೆ ಭೇಟಿ ನೀಡುವ ಮೂಲಕ ಸೌಹಾರ್ದತೆ ಮೆರೆದಿರುವುದು ನಿಜಕ್ಕೂ ಅನುಕರಣಿಯವೇ ಸರಿ.

Comments

Leave a Reply

Your email address will not be published. Required fields are marked *