ಆಪ್ ಆರೋಪಕ್ಕೆ ಉತ್ತರ ನೀಡಿದ ಗೌತಮ್ ಗಂಭೀರ್

ನವದೆಹಲಿ: ಆಮ್ ಆದ್ಮಿ ಪಾರ್ಟಿಯ ಆರೋಪಕ್ಕೆ ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ. ಗೌತಮ್ ಗಂಭೀರ್ ಎರಡು ಸ್ಥಳಗಳಲ್ಲಿ ವೋಟರ್ ಐಡಿ ಕಾರ್ಡ್ ಹೊಂದಿದ್ದಾರೆಂದು ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಆಪ್ ಅಭ್ಯರ್ಥಿಯಾಗಿರುವ ಅತಿಶಿ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಮಾಧ್ಯಮಗಳ ಜೊತೆ ಮಾತನಾಡಿದ ಗೌತಮ್ ಗಂಭೀರ್, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆಪ್ ಸರ್ಕಾರ ದೆಹಲಿಯಲ್ಲಿ ಯಾವುದೇ ಕೆಲಸವನ್ನು ಮಾಡಿಲ್ಲ. ಹಾಗಾಗಿ ಆಪ್ ಅಭ್ಯರ್ಥಿ ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗ ಪರಿಶೀಲನೆ ನಡೆಸುತ್ತದೆ. ಮತ ಕೇಳಲು ಯಾವುದೇ ವಿಷಯಗಳು ಇಲ್ಲದಿದ್ದಾಗ ಈ ರೀತಿಯ ಆರೋಪಗಳನ್ನು ಮಾಡುತ್ತಾರೆ. ನಕಾರಾತ್ಮಕ ತಂತ್ರಗಳನ್ನು ಬಳಸುವ ಮೂಲಕ ಚುನಾವಣೆಯನ್ನು ಗೆಲ್ಲಲು ಎದುರಾಳಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಖಡಕ್ ಉತ್ತರ ನೀಡಿದ್ದಾರೆ.

ಗೌತಮ್ ಗಂಭೀರ್ ಬಳಿ ರಾಜೇಂದ್ರ ನಗರ ಮತ್ತು ಕರೋಲ್ ಭಾಗ್ ನಲ್ಲಿ ವೋಟರ್ ಐಡಿ ಹೊಂದಿದ್ದಾರೆ ಎಂಬುವುದು ಅತಿಶಿಯವರ ಆರೋಪವಾಗಿದೆ. ಇತ್ತೀಚೆಗೆ ಪೂರ್ವಾನುಮತಿ ಪಡೆಯದೇ ರೋಡ್ ಶೋ ನಡೆಸಿದ್ದಕ್ಕೆ ಗೌತಮ್ ಗಂಭೀರ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿತ್ತು.

Comments

Leave a Reply

Your email address will not be published. Required fields are marked *