ಗೌರಿ ಲಂಕೇಶ್ ಹಂತಕರ ಪತ್ತೆಗೆ ಶೋಧ ತೀವ್ರ- ಇಂದು ಪತ್ರಕರ್ತೆಯ ಮನೆಗೆ ಎಸ್‍ಐಟಿ ಭೇಟಿ

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ.

ಎಸ್‍ಐಟಿ ಹಾಗೂ ಪೊಲೀಸರ ತಂಡ ಆರೋಪಿಗಳಿಗೆ ಬಲೆ ಬೀಸಿದೆ. ಐಜಿ ಬಿಕೆ ಸಿಂಗ್ ನೇತೃತ್ವದಲ್ಲಿ 3 ವಿಶೇಷ ತಂಡ ರಚನೆ ಮಾಡಲಾಗಿದೆ. ಇನ್ನೂ ಹಂತಕರ ಜಾಡು ಹಿಡಿದು ಕಾರ್ಯಾಚರಣೆಗಿಳಿದಿರುವ ವಿಶೇಷ ತಂಡ ಹಂತಕರ ಬಗ್ಗೆ ಸಾಕಷ್ಟು ಸುಳಿವು ಕಲೆ ಹಾಕಿದೆ.

ಸದ್ಯ ಗೌರಿ ಲಂಕೇಶ್ ನಿವಾಸದ ಬಳಿ ಕಾವಲಿಗೆ ಕೆಎಸ್‍ಆರ್‍ಪಿ ತುಕಡಿ ನಿಯೋಜಿಸಲಾಗಿದ್ದು, ಎಫ್‍ಎಸ್‍ಎಲ್ ಅಧಿಕಾರಿಗಳಿಗೆ ಪ್ರತಿ ಹಂತದ ವರದಿ ನೀಡುವಂತೆ ಎಸ್‍ಐಟಿ ಸೂಚನೆ ನೀಡಿದೆ. ಹಂತಕರ ಬೇಟೆಗೆ ಕಾರ್ಯಾಚರಣೆಗಿಳಿದಿರುವ ಪೊಲೀಸರು ಬೆಂಗಳೂರಿನಾದ್ಯಂತ ನಾಕಬಂದಿ ಹಾಕಿ ಇಂದು ಕೂಡ ತೀವ್ರ ತಪಾಸಣೆ ನಡೆಸಿದ್ದಾರೆ.

ಇದುವರೆಗೆ ಸಿಸಿಟಿವಿ ದೃಶ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ಸುಳಿವು ಸಿಕ್ಕಿಲ್ಲ. ಸಿಕ್ಕ ಸಿಸಿಟಿವಿ ದೃಶ್ಯದಲ್ಲೂ ಆರೋಪಿಯ ಚಹರೆ ಸರಿಯಾಗಿ ಕಾಣಿಸುತ್ತಿಲ್ಲ. ಪೊಲೀಸರು ಗೌರಿ ಅವರ ಫೋನ್ ಕರೆಗಳ ಸಿಡಿಆರ್ ಚೆಕ್ ಮಾಡುತ್ತಿದ್ದಾರೆ. ತನಿಖಾ ತಂಡ ಕರೆಗಳ ವಿನಿಮಯದ ಬಗ್ಗೆ ಬೆನ್ನತ್ತಿದೆ. ಇಂದು ವಿಶೇಷ ತನಿಖಾ ತಂಡದ ಸಭೆ ನಡೆಯಲಿದೆ. ಕೊಲೆಯ ಬಗ್ಗೆ ಇದುವರೆಗೆ ಸಂಗ್ರಹವಾಗಿರುವ ಸಾಕ್ಷ್ಯಾಧಾರಗಳ ಪರಿಶೀಲನೆಯಾಗಲಿದ್ದು, ಅನಂತರ ಮುಂದಿನ ತನಿಖೆಯ ಹಾದಿಯ ಬಗ್ಗೆ ತೀರ್ಮಾನ ಕೂಗೊಳ್ಳಲಾಗುತ್ತದೆ.

ಗೌರಿ ಲಂಕೇಶ್ ಹತ್ಯೆಯ ಬಗ್ಗೆ ತಂಗಿ ಕವಿತಾ ಲಂಕೇಶ್‍ರಿಂದ ದೂರು ಪಡೆದಿರುವ ಪೊಲೀಸರು, ಐಪಿಸಿ ಸೆಕ್ಷನ್ 302 ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿದ್ದಾರೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Comments

Leave a Reply

Your email address will not be published. Required fields are marked *