ಗೌರಿ ಹತ್ಯೆ ಕೇಸ್: ಶಂಕಿತ ಆರೋಪಿಯ ಮಂಪರು ಪರೀಕ್ಷೆಗೆ ಭಾಷೆಯ ತೊಡಕು

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಯ ಮಂಪರು ಪರೀಕ್ಷೆಗೆ ಭಾಷೆಯ ತೊಡಕು ಉಂಟಾಗಿದೆ.

ಫೆಬ್ರವರಿ 18ರಂದು ಪೊಲೀಸರು ಆರೋಪಿ ನವೀನ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನನ್ನು ಬಂಧಿಸಿದ್ದರು. ಈ ಸಂಬಂಧ ಆರೋಪಿ ಪದೇ ಪದೇ ಹೇಳಿಕೆಯನ್ನು ಬದಲಾಯಿಸುತ್ತಿದ್ದರಿಂದ ಮಂಪರು ಪರೀಕ್ಷೆಗೆ ಅವಕಾಶ ನೀಡಬೇಕೆಂದು ಎಸ್‍ಐಟಿ ನ್ಯಾಯಾಲಯದ ಮೊರೆ ಹೋಗಿತ್ತು.

ಈ ಸಂಬಂಧ ಮೂರನೇ ಎಸಿಎಂಎಂ ನ್ಯಾಯಾಲಯ ಅಹಮದಾಬಾದ್ ಎಫ್‍ಎಸ್‍ಎಲ್ ನಲ್ಲಿ ಮಂಪರು ಪರೀಕ್ಷೆ ನಡೆಸುವಂತೆ ಆದೇಶಿಸಿತ್ತು. ಆದರೆ ಅಹಮದಾಬಾದ್ ಎಫ್‍ಎಸ್‍ಎಲ್ ಅಧಿಕಾರಿಗಳಿಗೆ ಕನ್ನಡ ಭಾಷೆ ಅರ್ಥವಾಗದ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆ ವಿಳಂಬವಾಗಿದೆ ಅಂತಾ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮನೋವಿಜ್ಞಾನದ ಮಾಹಿತಿ ತಿಳಿದಿರುವ ಕನ್ನಡ ಮತ್ತು ಗುಜರಾತಿ ಭಾಷೆ ಗೊತ್ತಿರುವ ವ್ಯಕ್ತಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗೌರಿ ಕೇಸ್ – ಶಂಕಿತ ಆರೋಪಿ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ- ಏನಿದು ಪರೀಕ್ಷೆ? ಹೇಗೆ ಮಾಡುತ್ತಾರೆ? ಇಲ್ಲಿದೆ ಪೂರ್ಣ ವಿವರ

ಮಂಪರು ಪರೀಕ್ಷೆ ವೇಳೆಯಲ್ಲಿ ಗುಜರಾತಿನ ಅಧಿಕಾರಿಗಳು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದರೆ ಶಂಕಿತ ಆರೋಪಿಗೆ ಉತ್ತರಿಸಲು ಕಷ್ಟವಾಗುವ ಸಾಧ್ಯತೆಯಿದೆ. ಸದ್ಯ ಹೊಟ್ಟೆ ಮಂಜನನ್ನು ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿದ್ದು, ಸೂಕ್ತ ಭಾಷಾಂತರ ವ್ಯಕ್ತಿಗಳು ಸಿಕ್ಕ ನಂತರ ಕೋರ್ಟ್ ಗಮನಕ್ಕೆ ತಂದು ಅಹಮದಾಬಾದ್ ನ ಎಫ್‍ಎಸ್‍ಎಲ್ ಗೆ ಕರೆದೊಯ್ಯಲು ಎಸ್‍ಐಟಿ ಮುಂದಾಗಿದೆ.

Comments

Leave a Reply

Your email address will not be published. Required fields are marked *