ಗೌರಿ ಹತ್ಯೆಗೆ ಆಯುಧ ಒದಗಿಸಿದ್ದು ನಾನೇ – ಎಸ್‍ಐಟಿ ಮುಂದೆ ನವೀನ್ ಹೇಳಿಕೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ತನಿಖೆ ಚುರುಕುಗೊಳಿಸಿದ್ದು, ಹತ್ಯೆಗೆ ಆಯುಧಗಳನ್ನು ಒದಗಿಸಿದ್ದು ನಾನೇ ಎಂದು ಶಂಕಿತ ಆರೋಪಿ ನವೀನ್ ಹೇಳಿಕೆ ನೀಡಿದ್ದಾನೆ.

ನಾಲ್ವರು ಬಂದಿದ್ದರು. ಅವರಿಗೆ ತರಬೇತಿ ನೀಡಿದ್ದು ನಾನೇ. ಓಮ್ನಿ ಕಾರಿನಲ್ಲಿ ಬಂದು ನನ್ನನ್ನು ಭೇಟಿಯಾಗಿದ್ದು ನಿಜ. ಅವರ ಮುಖ ಪರಿಚಯ ಇದೆ. ಆದ್ರೆ ಹೆಸರುಗಳ ಬಗ್ಗೆ ಸ್ಪಷ್ಟತೆ ಇಲ್ಲ. ಮೈಸೂರಿನ ವ್ಯಕ್ತಿಯೊಬ್ಬರು ಪರಿಚಯ ಮಾಡಿಸಿದ್ದರು. ಇದಕ್ಕಿಂತ ಮುಂಚೆ ಸಾಕಷ್ಟು ಬಾರಿ ಅಯುಧಗಳನ್ನು ಮಾರಾಟ ಮಾಡಿದ್ದೇನೆ ಎಂದು ನವೀನ್ ಹೇಳಿದ್ದಾನೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ನಾಡ ಪಿಸ್ತೂಲ್ ಗಳನ್ನು ಮಾರಾಟ ಮಾಡುವ ವ್ಯಾಪಾರ ಮಾಡಿಕೊಂಡಿದ್ದೆ. ಹಿಂದೂ ಯುವ ಸೇನೆಯಲ್ಲಿ ಕಾರ್ಯಕರ್ತನಾಗಿದ್ದರಿಂದ ಬಹುಶಃ ಅವರು ನನ್ನ ಸಂಪರ್ಕ ಮಾಡಿರಬಹುದು. ಮೈಸೂರಿನ ವ್ಯಕ್ತಿಯ ಪರಿಚಯ ನನಗೆ ಕೆಲ ಸಮಾರಂಭಗಳಲ್ಲಿ ಆಗಿತ್ತು. ಆ ಪರಿಚಯದಿಂದ ನಾನು ನಾಲ್ವರಿಗೆ ಅತಿಥ್ಯ ನೀಡಿದ್ದೆ. ನಮ್ಮ ಹುಡುಗರೇ ಕಲ್ಬುರ್ಗಿ ಅವರನ್ನು ಹತ್ಯೆ ಮಾಡಿರಬಹುದು ಎಂದು ನವೀನ್ ಎಸ್‍ಐಟಿ ಮುಂದೆ ಸ್ಫೋಟಕ ಮಾಹಿತಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ನವೀನ್ ನೀಡಿರುವ ಮಾಹಿತಿ ಆಧರಿಸಿ ಪೊಲೀಸರು ಇದೀಗ ತನಿಖೆ ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಎಸ್‍ಐಟಿಯಿಂದ ಕಿರುಕುಳ: ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬಳಿಕ ಎಸ್‍ಐಟಿ ನವೀನ್ ಹೇಳಿಕೆಯನ್ನು ಹಾಗೂ ಪ್ರಕರಣದ ಮಾಹಿತಿಯುಳ್ಳ ನಾಲ್ಕು ಸಿ.ಡಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ವಿಚಾರಣೆ ವೇಳೆ, ನಾನು ಯಾವುದೇ ಹೇಳಿಕೆ ನೀಡಿಲ್ಲ. ಅಧಿಕಾರಿಗಳು ತಮಗೆ ತೋಚಿದ್ದನ್ನು ಬರೆದುಕೊಂಡು ಸಹಿ ಮಾಡುವಂತೆ ಒತ್ತಾಯಿಸಿದ್ದಾರೆ. ನನಗೆ ನಿರಂತರ ಕಿರುಕುಳ ನೀಡುತ್ತಿದ್ದು, ನಾನು ಯಾವುದೇ ಹೇಳಿಕೆಗೆ ಸಹಿ ಮಾಡಿಲ್ಲ ಎಂದು ದೂರಿದ್ದ. ಈ ವೇಳೆ ಆರೋಪಿಗೆ ಕಿರುಕುಳ ನೀಡಬಾರದು ಎಂದು ಎಸ್‍ಐಟಿಗೆ ನ್ಯಾಯಾಧೀಶರು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

Comments

Leave a Reply

Your email address will not be published. Required fields are marked *