ಟೂಥ್ ಬ್ರಶ್‍ನಿಂದ ಗೌರಿ ಲಂಕೇಶ್ ಹಂತಕರು ಅರೆಸ್ಟ್!

-ಸುಳಿವು ನೀಡಿತ್ತು ಟೂಥ್ ಬ್ರಶ್

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸುದೀರ್ಘ 6 ಸಾವಿರ ಪುಟಗಳಿರುವ ಚಾರ್ಜ್ ಶೀಟ್ ಅನ್ನು ಟ್ರಂಕ್‍ನಲ್ಲಿ ಇಟ್ಟು ಎಸ್‍ಐಟಿ ಅಧಿಕಾರಿಗಳು ಕೋರ್ಟ್‍ಗೆ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಆರೋಪಿಗಳ್ನು ಪೊಲೀಸರು ಹೇಗೆ ಪತ್ತೆ ಮಾಡಿದರು ಎಂಬುವುದು ಮಾಹಿತಿಗಳು ಉಲ್ಲೇಖವಾಗಿರುತ್ತವೆ. ಚಾರ್ಜ್ ಶೀಟ್ ಉಲ್ಲೇಖವಾದ ಕೆಲ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಆರೋಪಿಗಳ ಬಗ್ಗೆ ಟೂಥ್ ಬ್ರಶ್ ಒಂದು ಸುಳಿವು ನೀಡಿತ್ತು.

ಹಂತಕರು ಗೌರಿ ಹತ್ಯೆಗೂ ಮುನ್ನ ನಗರದ ಸುಂಕದಕಟ್ಟೆಯ ಸುರೇಶ್ ಎಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಗೌರಿ ಹಂತಕ ಪರಶುರಾಮ್ ವಾಗ್ಮೋರೆ, ಬೈಕ್ ಓಡಿಸಿದ್ದ ಗಣೇಶ್ ಮಿಸ್ಕಿನ್ ಇಬ್ಬರೂ ಸುರೇಶ್ ಮನೆಯಲ್ಲಿದ್ದರು. ಹಂತಕರು ಕೊಲೆಯ ಬಳಿಕ ಸುರೇಶ್ ಮನೆಯಲ್ಲಿ ತಮ್ಮ ಟೂಥ್ ಬ್ರೆಶ್ ಬಿಟ್ಟು ಹೋಗಿದ್ದರು. ಈ ಟೂಥ್ ಬ್ರಶ್‍ನ್ನೇ ಆಧಾರವಾಗಿಟ್ಟುಕೊಂಡು ಪೊಲೀಸರು ವಾಗ್ಮೋರೆ, ಮಿಸ್ಕಿನ್ ಡಿಎನ್‍ಎ ಟೆಸ್ಟ್ ಮಾಡಿಸಿದ್ದರು.

ಗೌರಿ ಹತ್ಯೆ ಬಳಿಕ ಸುರೇಶ್ ಮನೆಗೆ ವಾಪಸ್ಸಾಗದೇ ಪರಶುರಾಮ್ ಓಡಿಹೋಗಿದ್ದನು. ತಾನು ವಾಸ್ತವ್ಯ ಹೂಡಿದ್ದ ಮನೆಯಲ್ಲಿ ತನ್ನದೊಂದು ಅಂಗಿಯನ್ನು ವಾಗ್ಮೋರೆ ಬಿಟ್ಟು ಹೋಗಿದ್ದನು. ಈ ಅಂಗಿಯಲ್ಲಿ ಕೂದಲುಗಳು ಪತ್ತೆಯಾಗಿದ್ದುವು. ಪೊಲೀಸರು ಕೂದಲನ್ನು ಸಹ ಡಿಎನ್ ಎ ಪರೀಕ್ಷೆಗೆ ಒಳಪಡಿಸಿದ್ದರು. ಪರೀಕ್ಷೆಯಲ್ಲಿ ಶರ್ಟ್ ನಲ್ಲಿದ್ದ ಕೂದಲಿಗೂ ಪರಶುರಾಮ್ ವಾಗ್ಮೋರೆ ಮೈ ಮೇಲಿನ ಕೂದಲಿಗೂ ಸಾಮ್ಯತೆ ಕಂಡು ಬಂದಿದೆ. ಇತ್ತ ಟೂಥ್ ಬ್ರಶ್ ಪರೀಕ್ಷೆಯಲ್ಲಿ ಪೊಲೀಸರಿಗೆ ಸಕಾರಾತ್ಮಕ ಉತ್ತರ ಬಂದಿದೆ. ಈ ಎಲ್ಲ ಬಲವಾದ ಆಧಾರಗಳ ಮೇಲೆಯೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಹಿಂದೂ ಧರ್ಮದ ವಿರೋಧಿಗಳು ಯಾರು ಎಂಬುದನ್ನ ಮೂರು ವರ್ಗ ಮಾಡಿಕೊಂಡಿದ್ದರು. ಮೊದಲನೆಯದ್ದು ಹಿಂದೂಗಳಾಗಿದ್ದುಕೊಂಡು ಹಿಂದೂ ಧರ್ಮವನ್ನು ವಿರೋಧಿಸುವುದು. ಎರಡನೇಯದು, ಹಿಂದೂ ಧರ್ಮವನ್ನು ವಿರೋಧಿಸುವ ಅನ್ಯಧರ್ಮೀಯರು ಮತ್ತು ನಾಸ್ತಿಕರು ಎಂದು ಮೂರು ರೀತಿಯಲ್ಲಿ ವಿಂಗಡನೆ ಮಾಡಿಕೊಂಡಿದ್ದರು. ಆರೋಪಿಗಳು 2023ರ ವೇಳೆಗೆ ಭಾರತವನ್ನ ಸಂಪೂರ್ಣ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಟಾರ್ಗೆಟ್ ಹೊಂದಿದ್ದರು ಎಂದು ಹೇಳಲಾಗುತ್ತಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಗೌರಿ ಲಂಕೇಶ್ ತಮ್ಮ ಭಾಷಣದಲ್ಲಿ ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ, ಅದೊಂದು ಧರ್ಮವೇ ಅಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯಿಂದಲೇ ಹಂತಕರು ಮೊದಲಿಗೆ ಗೌರಿ ಲಂಕೇಶ್ ಅವರನ್ನೆ ಟಾರ್ಗೆಟ್ ಮಾಡಿಕೊಂಡಿದ್ದರು.

ಎಸ್‍ಐಟಿ ತನಿಖಾಧಿಕಾರಿ ಎಂ.ಎನ್.ಅನುಚೇತ್ ಅವರ ಮೂಲಕ 1ನೇ ಸಿಸಿಎಚ್ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಒಟ್ಟು 18 ಜನ ಆರೋಪಿಗಳು ಭಾಗಿ ಆಗಿರುವ ಕುರಿತು ಮಾಹಿತಿ ನೀಡಲಾಗಿದೆ. ಒಟ್ಟು 16 ಜನರನ್ನು ಬಂಧಿಸಿ ಕೋಕಾ ಕಾಯ್ದೆಯಡಿ ಎಸ್‍ಐಟಿ ಪ್ರಕರಣವನ್ನು ದಾಖಲಿಸಿತ್ತು. ಗೌರಿ ಹತ್ಯೆ ಪ್ರಕರಣ ಸಂಬಂಧ 650 ಪುಟಗಳ ಮೊದಲ ದೋಷಾರೋಪ ಪಟ್ಟಿಯನ್ನು 2018ರ ಮೇ ತಿಂಗಳಲ್ಲಿ ಎಸ್‍ಐಟಿ ಸಲ್ಲಿಸಿತ್ತು. ಹೆಚ್ಚುವರಿ ಆರೋಪ ಸಲ್ಲಿಕೆಗೆ ನವೆಂಬರ್ 27 ಕೊನೆಯ ದಿನವಾಗಿತ್ತು. ಹೀಗಾಗಿ ಶುಕ್ರವಾರ ಎಸ್‍ಐಟಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಈ ಪ್ರಕರಣದಲ್ಲಿ ಬೇಕಾಗಿದ್ದ ದಾದಾ ಹಾಗೂ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿರುವುದಾಗಿ ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೇ 450ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ.

ಆರೋಪಿಗಳು ಯಾರು?
ಪ್ರಕರಣದ ಪ್ರಮುಖ ಆರೋಪಿ (ಎ1) ಮಹಾರಾಷ್ಟ್ರ ಅಮೋಲ್ ಕಾಳೆ ಇವನು ಹತ್ಯೆಯ ಪ್ರಧಾನ ಸಂಚುಕಾರ, ಉಳಿದಂತೆ (ಎ2) ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ -ಶೂಟರ್, (ಎ3) ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ – ಬೈಕ್ ರೈಡರ್, (ಎ4) ಹುಬ್ಬಳ್ಳಿ ಅಮಿತ್ ಬುದ್ಧ -ರೈಡರ್ ಸಹಾಯಕ, (ಎ5) ಮಹಾರಾಷ್ಟ್ರದ ಅಮಿತ್ ದೇಗ್ವೇಕರ್ -ಹಣಕಾಸು ಉಸ್ತುವಾರಿ, (ಎ6) ಬೆಳಗಾವಿಯ ಭರತ್ ಕುರ್ನೆ – ಶಸ್ತ್ರಾಸ್ತ್ರ ತರಬೇತಿಗೆ ಆಶ್ರಯ ನೀಡಿದ್ದು, (ಎ7) ಮಹಾರಾಷ್ಟ್ರದ ಸುಧನ್ವಾ ಗೋಲೆಧಕರ್ – ಸಂಚುಗಾರ, (ಎ8) ಮಹಾರಾಷ್ಟ್ರದ ಶರದ್ ಕಲಾಸ್ಕರ್ – ಸಂಚುಗಾರ, (ಎ9) ಕೊಡಗಿನ ರಾಜೇಶ್ ಬಂಗೇರಾ – ಶಸ್ತ್ರಾಸ್ತ್ರ ತರಬೇತುದಾರ, (ಎ10) ಮಹಾರಾಷ್ಟ್ರದ ಶ್ರೀಕಾಂತ್ ಪಂಗಾರ್ಕರ್ – ಸಂಚುಗಾರ ಇವರನ್ನು ಸೇರಿದಂತೆ ಒಟ್ಟು 17 ಜನ ಆರೋಪಿಗಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *