ರಿಷಬ್ ಪಂತ್ ಬೆಂಬಲಕ್ಕೆ ನಿಂತ ‘ದಾದಾ’

ನವದೆಹಲಿ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟಿ20 ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‍ನಲ್ಲಿ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ವಿರುದ್ಧ ಹಲವು ಟೀಕೆಗಳು ಕೇಳಿ ಬಂದಿತ್ತು. ಅಲ್ಲದೇ ಹಲವು ಕ್ರಿಕೆಟ್ ವಿಶ್ಲೇಷಕರು ಕೆಲ ಪಂದ್ಯಗಳಿಗೆ ರಿಷಬ್‍ಗೆ ವಿಶ್ರಾಂತಿ ನೀಡಿದರೆ ಒಳಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಂತ್ ಬೆಂಬಲಕ್ಕೆ ನಿಂತಿದ್ದು. ಪಂತ್ ಸೂಪರ್ ಪ್ಲೇಯರ್ ಎಂದಿದ್ದಾರೆ. ಇದನ್ನು ಓದಿ: ‘ಶಾಲೆಗೆ ಹೋದ್ರೆ ಧೋನಿ, ಆ್ಯಪ್ ಮೂಲಕ ಶಿಕ್ಷಣ ಪಡೆದ್ರೆ ಪಂತ್ ಆಗ್ತಾರೆ’

ರಿಷಬ್ ಪಂತ್‍ಗೆ ಕೆಲ ಸಮಯಾವಕಾಶ ನೀಡಬೇಕಿದೆ. ಸದ್ಯ ಆತ ಒತ್ತಡದಲ್ಲಿರುವುದು ಸ್ಪಷ್ಟವಾಗಿ ಆರ್ಥವಾಗುತ್ತಿದೆ. ಆದ್ದರಿಂದಲೇ ಆತನ ಮೇಲೆ ಯಾವುದೇ ರೀತಿಯ ಒತ್ತಡ ಬೀಳದಂತೆ ಎಚ್ಚರಿಕೆ ವಹಿಸಬೇಕಿದೆ. ಪಂತ್ ಸೂಪರ್ ಪ್ಲೇಯರ್ ಆಗಿದ್ದು, ಟೀಂ ಇಂಡಿಯಾ ಬಾಂಗ್ಲಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ರಿಷಬ್ ಪಂತ್‍ಗೆ ಲಭಿಸಲಿಲ್ಲ. ಆದರೆ ವಿಕೆಟ್ ಹಿಂದೆ ಮಾತ್ರ ರಿಷಬ್ ವಿಫಲರಾಗಿದ್ದರು. ಬೌಂಡರಿ ಗೆರೆ ಬಳಿಯಿಂದ ಆಟಗಾರರು ಎಸೆಯುವ ಚೆಂಡನ್ನು ಪಡೆಯುವಲ್ಲಿಯೂ ಪಂತ್ ವಿಫಲರಾದ ಕಾರಣ ಎದುರಾಳಿ ತಂಡಕ್ಕೆ ಹೆಚ್ಚುವರಿ ರನ್ ಕೂಡ ಲಭಿಸಿತ್ತು. ಅಲ್ಲದೇ ಲಿಟಾನ್ ದಾಸ್ ಸ್ಟಂಪ್ ಔಟ್ ಮಾಡುವಲ್ಲಿ ಎಡವಟ್ಟು ಮಾಡಿ ಅವಕಾಶವನ್ನು ಕೈಚೆಲ್ಲಿದ್ದರು. ಅಲ್ಲದೇ ಬಾಂಗ್ಲಾದ ಮತ್ತೊಬ್ಬ ಆಟಗಾರನ ಸ್ಟಂಪ್ ಔಟ್ ವಿಚಾರದಲ್ಲೂ ಅದೃಷ್ಟವಶಾತ್ ಪಾರಾಗಿದ್ದರು. ಸದ್ಯ ಭಾನುವಾರ ನಡೆಯಲಿರುವ 3ನೇ ಅಂತಿಮ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಪ್ರದರ್ಶನದ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ.

Comments

Leave a Reply

Your email address will not be published. Required fields are marked *