ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಗ್ಯಾಂಗ್‍ಸ್ಟರ್ ಬಂಧನ

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಗ್ಯಾಂಗ್ ಸ್ಟರ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸಂಪತ್ ನೆಹ್ರಾ (28) ಎಂಬ ವ್ಯಕ್ತಿಯನ್ನು ಪೊಲೀಸರು ಕಳೆದ ವಾರ ಹೈದರಾಬಾದ್ ನಲ್ಲಿ ಬಂಧಿಸಿದ್ದಾರೆ.

ಸಲ್ಮಾನ್ ಖಾನ್ ಹತ್ಯೆ ಕುರಿತಂತೆ ಸಂಚು ರೂಪಿಸಲು ನೆಹ್ರಾ ಮುಂಬೈಗೆ ತೆರಳಿದ್ದ. ಸಲ್ಮಾನ್ ಖಾನ್ ರ ಮನೆಯ ಫೋಟೊಗಳನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ. ಅಲ್ಲದೇ ಅವರ ಮನೆಗೆ ತೆರಳುವ ರಸ್ತೆಯ ಮಾಹಿತಿಯನ್ನೂ ಮೊಬೈಲ್ ನಲ್ಲಿ ಹೊಂದಿದ್ದ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.

ಸಂಪತ್ ನೆಹ್ರಾ ಮೇ ಮೊದಲ ವಾರದಲ್ಲೇ ಸಲ್ಮಾನ್ ಮನೆಯ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದನು. ಬಾಲ್ಕನಿಯಲ್ಲಿ ಅಭಿಮಾನಿಗಳಿಗಾಗಿ ಸಲ್ಮಾನ್ ಬರುವ ಹಾಗೂ ಬಾಲ್ಕನಿಯ ದೂರವನ್ನೂ ಕುರಿತು ಮಾಹಿತಿ ಕಲೆಹಾಕಿದ್ದ ಎಂದು ಎನ್ನುವ ವಿಚಾರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಸಂಪತ್ ನೆಹ್ರಾ ಪೊಲೀಸರಿಗೆ 12 ಕ್ಕೂ ಹೆಚ್ಚು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದನು. ಅಲ್ಲದೇ ಈತನೊಬ್ಬ ಶಾರ್ಪ್ ಶೂಟರ್ ಆಗಿದ್ದು ಕುಖ್ಯಾತ ಲಾರೆನ್ಸ್ ಬಿಶ್ನೋಯ್ ಗ್ಯಾಂಗ್ ನೊಂದಿಗೆ ಸಂಬಂಧ ಹೊಂದಿದ್ದ. ಈ ಗ್ಯಾಂಗ್ ಸಲ್ಮಾನ್ ಖಾನ್ ಹತ್ಯೆಗೆ ಜನವರಿ ತಿಂಗಳಲ್ಲೇ ಸಂಚು ರೂಪಿಸಿತ್ತು.

ಈ ನೆಹ್ರಾ ರಾಜಸ್ಥಾನ್ ಮೂಲದ ಬಿಶ್ನೋಯಿ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಹಾಗಾಗಿ ಈತ ನಟ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಗೆ ಸಂಬಂಧಿಸಿದಂತೆ ಈ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ನಟ ಸಲ್ಮಾನ್ 1998 ರ ಎಪ್ರೀಲ್ ನಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಸಲ್ಮಾನ್‍ಗೆ ನ್ಯಾಯಾಲಯ ಎರಡು ವರ್ಷ ಶಿಕ್ಷೆ ವಿಧಿಸಿತ್ತು. ಸದ್ಯ ಜಾಮೀನಿನ ಮೇಲೆ ಹೊರಗೆ ಬಂದಿರುವ ಸಲ್ಮಾನ್ ಖಾನ್ ರ ಹತ್ಯೆಗೆ ನೆಹ್ರಾ ಸಂಚು ರೂಪಿಸಿದ್ದನು ಎಂದು ವರದಿಯಾಗಿದೆ.

ಬಿಶ್ನೋಯಿ ಸಮಾಜದ ಗುರು ಭಗವಾನ್ ಜಂಬೇಶ್ವರ ಅವರು ಕೃಷ್ಣ ಮೃಗವನ್ನಾಗಿ ಪುನರ್ ಜನ್ಮ ತಾಳಿದ್ದಾರೆ ಎನ್ನುವ ನಂಬಿಕೆಯಿದೆ. ಈ ಕಾರಣಕ್ಕೆ ಬಿಶ್ನೋಯಿ ಸಮಾಜದವರು ಕೃಷ್ಣ ಮೃಗದ ಮೇಲೆ ಪೂಜ್ಯ ಭಾವನೆ ಹೊಂದಿದ್ದಾರೆ. ಸಲ್ಮಾನ್ ಖಾನ್ ಕೃಷ್ಣ ಮೃಗ ಭೇಟೆ ಪ್ರಕರಣದಲ್ಲೂ ಬಿಶ್ನೋಯಿ ಸಭಾ ಕಾನೂನು ಹೋರಾಟ ನಡೆಸುತ್ತಿದೆ.

Comments

Leave a Reply

Your email address will not be published. Required fields are marked *