ಸರ್ಕಾರಿ ಇಲಾಖೆಯ ನಕಲಿ ನಂಬರ್ ಪ್ಲೇಟ್ ಹಾಕಿ ದರೋಡೆಗೆ ಸಂಚು- ಅಂತಾರಾಜ್ಯ ತಂಡ ಖಾಕಿ ಬಲೆಗೆ

ಮಂಗಳೂರು: ಉಗ್ರರ ದಾಳಿಯ ಭೀತಿ ಹಿನ್ನೆಲೆ ಶುಕ್ರವಾರದಿಂದ ರಾಜ್ಯದ ದೊಡ್ಡ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆ ತಡರಾತ್ರಿ ಅನುಮಾನಾಸ್ಪದ ಎಂಟು ಮಂದಿಯನ್ನು ಪೊಲೀಸರು ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದರು. ಆದರೆ ವಿಚಾರಣೆ ವೇಳೆ ಆರೋಪಿಗಳ ಅಸಲಿ ಬಣ್ಣ ಬಯಲಾಗಿದೆ. ಪೊಲೀಸರ ವಶದಲ್ಲಿ ಇದ್ದವರು ಹೈಟೆಕ್ ವಂಚನೆ, ದರೋಡೆಗೆ ಸಂಚು ಹಾಕಿದ್ದ ಅಂತಾರಾಜ್ಯ ತಂಡವೆಂಬುದು ಬೆಳಕಿಗೆ ಬಂದಿದೆ.

ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಹರ್ಷ ಅವರು ಇಂದು ಸುದ್ದಿಗೋಷ್ಠಿ ನಡೆಸಿ, ಪೊಲೀಸರು ವಶಕ್ಕೆ ಪಡೆದಿದ್ದ 8 ಆರೋಪಿಗಳು ಜನರನ್ನು ಅಪಹರಿಸಿ, ದರೋಡೆಗೆ ಸಂಚು ಹೂಡಿದ್ದರು. ಅಲ್ಲದೆ ಕೇಂದ್ರ ಸರ್ಕಾರಿ ಇಲಾಖೆಯ ನಕಲಿ ನಂಬರ್ ಪ್ಲೇಟ್ ಕಾರಿಗೆ ಹಾಕಿ ದರೋಡೆಗೆ ಸಂಚು ರೂಪಿಸಿದ್ದರು ಎನ್ನುವುದು ತಿಳಿದುಬಂದಿದೆ. ಕೇರಳ ಮೂಲದ ಸ್ಯಾಂ ಪೀಟರ್ ನೇತೃತ್ವದಲ್ಲಿ ಈ ಎಂಟು ಜನರ ತಂಡ ಕಾರ್ಯನಿರ್ವಹಿಸುತ್ತಿತ್ತು ಎಂದು ಮಾಹಿತಿ ನೀಡಿದರು.

ಕೋಲ್ಕತ್ತಾ, ಭುವನೇಶ್ವರ ನಗರಗಳ ಜೊತೆ ಕೂಡ ಸ್ಯಾಂ ಪೀಟರ್ ಲಿಂಕ್ ಹೊಂದಿದ್ದನು. ಕೇಂದ್ರ ಸರ್ಕಾರಿ ಇಲಾಖೆಯ ನಕಲಿ ನಂಬರ್ ಪ್ಲೇಟ್ ತಮ್ಮ ಕಾರಿಗೆ ಹಾಕಿಕೊಂಡು ಈ ತಂಡ ದರೋಡೆಗೆ ಸಂಚು ಹೂಡಿತ್ತು. ಆರೋಪಿಗಳು ಕಾರಿನಲ್ಲಿ ಎನ್‍ಸಿಐಬಿ, ಡೈರೆಕ್ಟರ್, ಭಾರತ ಸರ್ಕಾರ ಎಂದು ನಕಲಿ ಬೋರ್ಡ್ ಹಾಕಿಕೊಂಡಿದ್ದರು ಎಂದು ತಿಳಿಸಿದರು.

ಬಂಧಿತ ಆರೋಪಿಗಳನ್ನು ಕೇರಳದ ಕೊಯಿಲಾಡಿ ಮೂಲದ ಸ್ಯಾಂ ಪೀಟರ್, ಮಡಿಕೇರಿಯ ಟಿ.ಕೆ ಬೋಪಣ್ಣ, ಬೆಂಗಳೂರಿನ ನೀಲಸಂದ್ರದ ಮದನ್, ಉತ್ತರ ಹಳ್ಳಿಯ ಕೋದಂಡರಾಮ, ವಿರಾಜಪೇಟೆಯ ಚಿನ್ನಪ್ಪ, ಕನಕಪುರದ ಸುನಿಲ್ ರಾಜು, ಮಂಗಳೂರಿನ ಕುಳೂರಿನ ಜಿ. ಮೊಯ್ದೀನ್, ಫಳ್ನೀರ್ ನಿವಾಸಿ ಎಸ್.ಎ.ಕೆ ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ.

ಸದ್ಯ ಆರೋಪಿಗಳಿಂದ ಎರಡು ಮಹೀಂದ್ರಾ ಕಾರು, 45 ಎಂಎಂ ಪಿಸ್ತೂಲು, ಏರ್‍ಗನ್ ರೀತಿ ಆಯುಧ, ಐದು ಸಜೀವ ಗುಂಡು, ಲ್ಯಾಪ್ ಟಾಪ್, ವಾಯ್ಸ್ ರೆಕಾರ್ಡರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಪಂಪ್ ವೆಲ್‍ನಲ್ಲಿ ಲಾಡ್ಜ್ ರೂಮ್ ಪಡೆದು ದರೋಡೆಗೆ ಆರೋಪಿಗಳು ಸಂಚು ರೂಪಿಸಿದ್ದರು ಕದ್ರಿ ಪೊಲೀಸರ ಕಾರ್ಯಾಚರಣೆ ನಡೆಸಿ ಸತ್ಯಾಂಶ ಭೇದಿಸಿದ್ದಾರೆ.

Comments

Leave a Reply

Your email address will not be published. Required fields are marked *