ಗಣೇಶ ಹಬ್ಬಕ್ಕೆ ಟಿಕೆಟ್ ದರ ಏರಿಸಲ್ಲ: ಸಾರಿಗೆ ಸಚಿವ ಡಿಸಿ ತಮ್ಮಣ್ಣ

ಬೆಂಗಳೂರು: ಗಣೇಶ ಹಬ್ಬಕ್ಕೆ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿಯವರು ಹೆಚ್ಚಳ ಮಾಡುವ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳಿಗೆ ಹೆಚ್ಚು ಬಸ್ ಸೇವೆ ಒದಗಿಸಿ ಅಂತ ಸೂಚನೆ ನೀಡಿದ್ದೇನೆ. ಅಗತ್ಯ ಇರುವ ಜಿಲ್ಲೆಗಳಿಗೆ ಸರ್ಕಾರದಿಂದಲೇ ಹೆಚ್ಚು ಬಸ್ ಸೇವೆ ಒದಗಿಸುತ್ತೇವೆ. ಈ ಮೂಲಕ ಖಾಸಗಿಯವರಿಗೆ ಕಡಿವಾಣ ಹಾಕಲಾಗುತ್ತದೆ ಎಂದರು.

 

40 ಸ್ಲೀಪರ್ ಕೋಚ್ ಬಸ್: ನೂತನವಾಗಿ 40 ಸ್ಲೀಪರ್ ಕೋಚ್ ಬಸ್ ಖರೀದಿಗೆ ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ ಎಂದು ತಮ್ಮಣ್ಣ ತಿಳಿಸಿದರು. ಖಾಸಗಿಯವರು ಸ್ಲೀಪರ್ ಕೋಚ್ ನಲ್ಲಿ ಹೆಚ್ಚು ಹಣ ಪಡೆಯುತ್ತಿರುವ ಆರೋಪಗಳು ಕೇಳಿ ಬರ್ತಿವೆ. ಹೀಗಾಗಿ ನಾವೇ 40 ಸ್ಲೀಪರ್ ಕೋಚ್ ಬಸ್ ಖರೀದಿಗೆ ನಿರ್ಧಾರ ಮಾಡಿದ್ದೇವೆ. ಅಗತ್ಯ ಇರುವ ಬೆಂಗಳೂರಿನ ಕಡೆ ಸ್ಲೀಪರ್ ಕೋಚ್ ಬಸ್ ಸಂಚಾರ ವ್ಯವಸ್ಥೆ ಮಾಡುತ್ತೇವೆ ಅಂತ ಸ್ಪಷ್ಟಪಡಿಸಿದರು.

ಎಲೆಕ್ಟ್ರಿಕಲ್ ಬಸ್ ಸಂಬಂಧ ಇನ್ನು ಯಾವುದೇ ನಿರ್ಧಾರವಾಗಿಲ್ಲ. 80 ಬಸ್ ಖರೀದಿ ವಿಚಾರ ಪರಿಶೀಲನೆ ಹಂತದಲ್ಲಿದೆ. ಖಾಸಗಿ ಅವರಿಗೆ ನೀಡಬೇಕಾ ಅಥವಾ ಏನು ಮಾಡಬೇಕು ಅನ್ನೋದನ್ನ ನಿರ್ಧಾರ ಮಾಡಬೇಕಿದೆ. ಖಾಸಗಿ ಅವರಿಗೆ ಕೊಡಬೇಕು ಅನ್ನೋದು ಹಿಂದಿನ ಸರ್ಕಾರದ ನಿರ್ಧಾರ. ಈ ಬಗ್ಗೆ ಸೂಕ್ತವಾದ ಅಧ್ಯಯನ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.

ಅಗತ್ಯ ಇಲ್ಲದ ಕಡೆ ಇರೋ ಬಸ್ ಗಳನ್ನ ಕಡಿತ ಮಾಡಿ ಅಗತ್ಯ ಇರೋ ಕಡೆ ಬಸ್ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಅಧಿಕಾರಿಗಳಿಗೆ ಈ ಸಂಬಂಧ ವರದಿ ನೀಡಲು ಸೂಚಿಸಿದ್ದೇನೆ. ಒಂದೇ ರೂಟ್ ನಲ್ಲಿ ಎರಡೆರಡು ಬಸ್ ಅವಶ್ಯಕತೆ ಇಲ್ಲದೆ ಇದ್ದರೂ ಓಡಾಡುತ್ತಿವೆ. ಹೀಗಾಗಿ ಅಂತಹ ಕಡೆ ಬಸ್ ಕಡಿಮೆ ಮಾಡಿ ಅವಶ್ಯಕತೆ ಇರೋ ಕಡೆ ಬಸ್ ಸೇವೆ ಒದಗಿಸುತ್ತೇವೆ. ಎಲ್ಲಾ ಡಿಪೋ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಕ್ರಮವಹಿಸಿ ಬಸ್ ಸೇವೇ ಒದಗಿಸುತ್ತೇವೆ ಅಂತ ಸಚಿವರು ತಿಳಿಸಿದರು.

ಬಸ್ ಪಾಸ್ ಚರ್ಚೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರ ಜೊತೆ ಮಾತನಾಡಲಾಗಿದೆ. ಎಸ್ ಸಿ/ಎಸ್ ಟಿ ಇಲಾಖೆಯ ಹಣದಲ್ಲಿ 25% ಹಣವನ್ನು ಬಳಕೆ ಮಾಡುವ ಕುರಿತು ಚರ್ಚೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರು ಇದಕ್ಕೆ ಒಪ್ಪಿದ್ದಾರೆ. ಸಿಎಂ ಜೊತೆ ಚರ್ಚೆ ಮಾಡಿ ಇನ್ನೊಂದು ವಾರದಲ್ಲಿ ಪಾಸ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವರು ಹೇಳಿದರು.

ಖಾಸಗಿ ಬಸ್ ಮಾಫಿಯಾ ಲಾಬಿ ತಡೆಯಲು 70 ವರ್ಷಗಳಿಂದ ಸಾಧ್ಯವಾಗಿಲ್ಲ. ಮೂರು ತಿಂಗಳಿಗೆ ಮಾಫಿಯಾ ನಿಯಂತ್ರಣ ಸಾಧ್ಯವಿಲ್ಲ. ದರ ಕಡಿಮೆಗೊಳಿಸಿ ಖಾಸಗಿಯವರಿಗೆ ಪೈಪೋಟಿ ನೀಡುವ ಪ್ಲಾನ್ ಸರ್ಕಾರದ್ದು. ಖಾಸಗಿ ಬಸ್ ಸ್ಥಳಾಂತರ ವಿಚಾರ ಸರ್ಕಾರದ ಮುಂದಿದೆ. ಪೀಣ್ಯದಲ್ಲಿರುವ ಖಾಸಗಿ ಬಸ್ ನಿಲ್ದಾಣ ಬದಲಾವಣೆ ಬಗ್ಗೆ ಮಾಲೀಕರ ಜತೆ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಮ್ಮಣ್ಣ ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

Comments

Leave a Reply

Your email address will not be published. Required fields are marked *