ಮೈದುಂಬಿ ಹರಿಯುತ್ತಿದೆ ಮಂಡ್ಯದ ಗಾಣಾಳು ಫಾಲ್ಸ್

ಮಂಡ್ಯ: ಒಂದು ಕಡೆ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅವಾಂತರ ಸೃಷ್ಟಿಯಾಗುತ್ತಿದೆ. ಮತ್ತೊಂದೆಡೆ ಫಾಲ್ಸ್ ಗಳು ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಫಾಲ್ಸ್ ಗಳು ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಧುಮ್ಮಿಕ್ಕಿ ಹರಿಯುವ ನೀರನ್ನು ನೋಡುವುದೇ ಒಂದು ಚಂದಾ. ನಿರಂತರ ಮಳೆಯಿಂದ ಶಿಂಷಾ ಹೊಳೆಯಲ್ಲಿ ನೀರು ಬರುತ್ತಿರುವುದರಿಂದ ಅಪರೂಪದ ಗಾಣಾಳು ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ನೋಡಲು ಎರಡು ಕಣ್ಣುಗಳು ಸಾಲುತ್ತಿಲ್ಲ. ಅಷ್ಟು ಆಕರ್ಷಕವಾಗಿ ಎಲ್ಲರನ್ನು ತನ್ನತ್ತಾ ಕೈ ಬೀಸಿ ಕರೆಯುತ್ತಿದೆ.

ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು ಗ್ರಾಮದ ಸಮೀಪದಲ್ಲಿರುವ ಫಾಲ್ಸ್ ಮೈದುಂಬಿ ಹರಿಯುತ್ತಿದೆ. ಗಾಣಾಳು ಫಾಲ್ಸ್ ನೋಡುವುದಕ್ಕೆ ಅಮೆರಿಕದ ನಯಾಗ್ರಾ ಫಾಲ್ಸ್ ನಂತೆ ಕಾಣುವುದರಿಂದ ಇದನ್ನು ಮಂಡ್ಯದ ನಯಾಗ್ರಾ ಫಾಲ್ಸ್ ಅಂತಾ ಕರೆಯುತ್ತಾರೆ. ಆದರೆ ಅಲ್ಲಿನ ಸ್ಥಳೀಯರು ಇದನ್ನು ಬೆಂಕಿ ಫಾಲ್ಸ್ ಅಂತಾ ಕರಿಯುತ್ತಾರೆ. ಹಾಗಾಗಿ ಈ ಫಾಲ್ಸ್ ಬೆಂಕಿ ಫಾಲ್ಸ್ ಅಂತಾನೆ ಚಿರಪರಿಚಿತವಾಗಿದೆ.

ಈ ಫಾಲ್ಸ್ ನ ವಿಶೇಷತೆ ಎಂದರೆ ಯಾವಾಗಲೂ ತುಂಬಿ ಹರಿಯುವುದಿಲ್ಲ. ಶಿಂಷಾ ಹೊಳೆಯಲ್ಲಿ ನೀರು ಬಂದರೆ ಮಾತ್ರ ಈ ಫಾಲ್ಸ್ ಗೆ ಜೋರಾಗಿ ನೀರು ಹರಿದು ಬರುತ್ತದೆ. ಕಳೆದ ಒಂದೂವರೆ ವರ್ಷದಿಂದ ಗಾಣಾಳು ಫಾಲ್ಸ್ ಗೆ ನೀರು ಹರಿದು ಬಂದಿರಲಿಲ್ಲ. ಆದರೆ ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಶಿಂಷಾ ನದಿ ತುಂಬಿ ಹರಿಯುತ್ತಿದೆ.

 

ಶಿಂಷಾ ಹೊಳೆಗೆ ಮಾರ್ಕೋನಹಳ್ಳಿ ಡ್ಯಾಂನಿಂದಲೂ ನೀರು ಹರಿದುಬಂದು ಸೇರುತ್ತಿದೆ. ಈ ನೀರು ಇಗ್ಲೂರು ಬ್ಯಾರೇಜ್ ಮೂಲಕ ಗಾಣಾಳುವಿಗೆ ಹರಿದು ಬರುತ್ತದೆ. ಇದರಿಂದ ಫಾಲ್ಸ್ ನಲ್ಲಿ ನೀರಿನ ಭೋರ್ಗರೆತ ಹೆಚ್ಚಾಗಿದೆ.

ಮಳೆ ಬಂದರೆ ಅಥವಾ ಶಿಂಷಾ ಹೊಳೆಯಲ್ಲಿ ನೀರು ಬಂದರೆ ಮಾತ್ರ ಈ ಫಾಲ್ಸ್ ನಲ್ಲಿ ನೀರು ಬರುವುದರಿಂದ ಇದೊಂದು ಅಪರೂಪದ ಫಾಲ್ಸ್ ಅಂತಾನೇ ಕರೆಯಲಾಗುತ್ತದೆ. ಈ ಫಾಲ್ಸ್ ಮೈದುಂಬಿ ಹರಿಯುತ್ತಿರೋದನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು, ಪ್ರವಾಸಿಗರು ಆಗಮಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *