ಗದಗ ಜಿಲ್ಲೆಯ ಯೋಧ ರೈಲಿನಡಿ ಸಿಲುಕಿ ಪುಣೆಯಲ್ಲಿ ಸಾವು

ಗದಗ: ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ಗದಗ ಜಿಲ್ಲೆಯ ಯೋಧನೋರ್ವ ರೈಲು ಇಳಿಯುವ ವೇಳೆ ಕಾಲುಜಾರಿ ರೈಲಿನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಪುಣೆನಲ್ಲಿ ನಡೆದಿದೆ.

ಗದಗ ಜಿಲ್ಲೆ ಮುಳಗುಂದ ಪಟ್ಟಣದ ಬಸವರಾಜ್ ಹಿರೇಮಠ(37) ರೈಲಿನ ಅಡಿ ಸಿಲುಕಿ ಮೃತಪಟ್ಟ ಯೋಧ. ಇಂದು ಬೆಳಗ್ಗೆ ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದೆ. ಮೃತ ಯೋಧ ಬಸವರಾಜ್ 2005 ರಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು. ಕಳೆದ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪುಣೆ ಸೇನಾ ಸಿಗ್ನಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

15 ದಿನಗಳ ಹಿಂದೆ ರಜೆಗೆಂದು ಬಸವರಾಜ್ ಊರಿಗೆ ಬಂದಿದ್ದರು. ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿರುವ ವೇಳೆ ದುರ್ಘಟನೆ ನಡೆದಿದೆ. ಮೃತ ಬಸವರಾಜ್ ನಿವೃತ್ತಿಯಾಗಲು ಕೇವಲ 9 ತಿಂಗಳು ಮಾತ್ರ ಬಾಕಿ ಉಳಿದಿತ್ತು. ಬರುವ ವೇಳೆ ನಿವೃತ್ತಿಯಾಗಿ ಊರಿಗೆ ಬರುವುದಾಗಿ ಮನೆಯವರಿಗೆ ಹೇಳಿ ಹೋಗಿದ್ದರು. ಈಗ ನಿವೃತ್ತಿಯಾಗಿ ಬರುವ ಮುನ್ನ ಶವವಾಗಿ ಊರಿಗೆ ಮರಳುತ್ತಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Comments

Leave a Reply

Your email address will not be published. Required fields are marked *