ಗ್ಯಾಸ್ ಟ್ಯಾಂಕರ್‌ನಲ್ಲಿ ಅವಿತು ಬಂದು ಇಳಿಯುವಾಗ ಸಿಕ್ಕಿಬಿದ್ದ 12 ಮಂದಿ

ಗದಗ: ಲಾಕ್‍ಡೌನ್ ಹಿನ್ನೆಲೆ ಗುಳೆಹೋಗಿದ್ದ 12 ಜನರನ್ನು ಮೆಡಿಕಲ್ ಎಮರ್ಜೆನ್ಸಿ ಪ್ರೈಮ್ ಗ್ಯಾಸ್ ವಾಹನದಲ್ಲಿ ಕರೆತಂದು ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಹೊರವಲಯದಲ್ಲಿ ಕಂಡುಬಂದಿದೆ.

ಮಂಗಳೂರನಲ್ಲಿ ಗ್ಯಾಸ್ ಖಾಲಿ ಮಾಡಿ, ಗದಗಕ್ಕೆ ಮರಳಿ ಬರುವ ವೇಳೆ ಮಾರ್ಗ ಮಧ್ಯೆ 12 ಜನರನ್ನು ಚಾಲಕ, ಕ್ಲೀನರ್ ಕರೆತಂದಿದ್ದಾರೆ. ಈ ಗ್ಯಾಸ್ ಟ್ಯಾಂಕರ್‌ನಲ್ಲಿ 12 ಜನರನ್ನು ಕರೆತಂದಿರೋದಾದ್ರೂ ಹೇಗೆ? ಮುಂದಿನ ಕ್ಯಾಬಿನ್‍ನ ಎಂಜಿನ್ ಬಳಿ 12 ಜನರ ಜೊತೆ ಚಾಲಕ, ಕ್ಲೀನರ್ ಕೂತು ಬರಲು ಸಾಧ್ಯವೇ ಇಲ್ಲ. ಇದರಲ್ಲಿ ಮಕ್ಕಳು ಸಹ ಇದ್ದಾರೆ. ಹಾಗಾದ್ರೆ ಹಣದ ಆಸೆಗೆ ಟ್ಯಾಂಕರ್‌ನಲ್ಲಿ ಏನಾದ್ರೂ ಕರೆತಂದರಾ? ಚಾಲಕ, ಕ್ಲೀನರ್‌ನ ಎಡವಟ್ಟಿನಿಂದ ಅಕಸ್ಮಾತ್ ಏನಾದರೂ ಜೀವಕ್ಕೆ ಹಾನಿಯಾಗಿದ್ರೆ ಹೊಣೆಯಾರು ಎಂಬ ಹತ್ತು ಹಲವು ಪ್ರಶ್ನೆ ಕಾಡತೊಡಗಿದೆ.

ಹೀಗೆ ಗ್ಯಾಸ್ ಟ್ಯಾಂಕರ್‌ನಲ್ಲಿ ಬಂದ ಜನರು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಮೂಲದ ಕೂಲಿ ಕಾರ್ಮಿಕರು. ಕಳೆದ ಎರಡು ತಿಂಗಳ ಹಿಂದಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‍ಗೆ ಇವರು ಗುಳೆ ಹೋಗಿದ್ದರು. ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ, ಆಹಾರವೂ ಇಲ್ಲದ ಪರದಾಡುತ್ತಾ ಗ್ರಾಮಕ್ಕೆ ವಾಪಾಸ್ ಆಗುತ್ತಿದ್ದರು. ಸುರತ್ಕಲ್‍ನಿಂದ ನಡೆದುಕೊಂಡು ಬರುವ ವೇಳೆ ಮಾರ್ಗ ಮಧ್ಯೆ ಕೂಲಿ ಕಾರ್ಮಿಕರನ್ನು ಹತ್ತಿಸಿಕೊಂಡಿರುವುದಾಗಿ ಚಾಲಕ ಬಾಯಿಬಿಟ್ಟಿದ್ದಾನೆ. ಆದರೆ ಒಬ್ಬರಿಗೆ 1 ಸಾವಿರ ರೂ. ನೀಡುವಂತೆ ಬೇಡಿಕೆಯಿಟ್ಟು ವಾಹನದಲ್ಲಿ ಕರೆತಂದಿರುವ ಆರೋಪ ಕೂಡ ಕೇಳಿಬರುತ್ತಿದೆ.

ಲಕ್ಷ್ಮೇಶ್ವರ ಹೊರವಲಯದಲ್ಲಿ ಟ್ಯಾಂಕರ್‌ನಿಂದ ಕೆಳಗೆ ಇಳಿಸುವ ವೇಳೆ ಕೂಲಿ ಕಾರ್ಮಿಕರು ಹಾಗೂ ಚಾಲಕ, ಕ್ಲೀನರ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಈ 12 ಜನರನ್ನು ವೈದ್ಯಕೀಯ ತಪಾಸಣೆಗೆ ಲಕ್ಷ್ಮೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂತರ ಮೊರಾರ್ಜಿ ವಸತಿ ಶಾಲೆಯ 12 ಜನರನ್ನೂ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತೆ. ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು, ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *