ಕಳಸಾ ಬಂಡೂರಿ ಯೋಜನೆ ಮತ್ತು ಗಡಿ ವಿಚಾರಕ್ಕೆ ಮತ್ತೆ ಪ್ರತಿಭಟನೆ ಶುರು

ಗದಗ: ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಸರ್ಕಾರ ತಡೆಯಾಜ್ಞೆ ನೀಡಿರುವುದು ಹಾಗೂ ಕರ್ನಾಟಕದ ಬೆಳಗಾವಿ, ಕಾರವಾರ ಜಿಲ್ಲೆಗಳು ತನ್ನ ಭಾಗ ಎಂದು ಮಹಾರಾಷ್ಟ್ರ ಕ್ಯಾತೆ ತೆಗೆದಿರುವುದನ್ನು ವಿರೋಧಿಸಿ ಗದಗನಲ್ಲಿ ಕನ್ನಡ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದ ಮಹಾತ್ಮ ಗಾಂಧೀಜಿ ಸರ್ಕಲ್‍ನಲ್ಲಿ ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಲೋಕಸಭೆ ಚುನಾವಣೆ ವೇಳೆ ಪ್ರಧಾನ ಮಂತ್ರಿಗಳು ಈ ಯೋಜನೆ ಜಾರಿಗೊಳಿಸುವ ಭರವಸೆಗಳನ್ನು ನೀಡಿದ್ದರು. ಈಗ ಕಳಸಾ ಬಂಡೂರಿ ನಾಲಾ ಯೋಜನೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಹಿಂಪಡೆದುಕೊಂಡು ತಡೆಯಾಜ್ಞೆ ನೀಡಿದೆ. ಇದು ಕರ್ನಾಟಕ ರಾಜ್ಯಕ್ಕಾದ ಅನ್ಯಾಯ. ಗೋವಾ ಸರ್ಕಾರದ ತಾಳಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಕುಣಿಯುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಕಳಸಾ ಬಂಡೂರಿ ಯೋಜನೆ ತಡೆಯಾಜ್ಞೆ ಹಿಂಪಡೆಯಬೇಕು, ಕುಡಿಯುವ ನೀರಿನ ನಾಲಾಗೆ ಕೂಡಲೇ ಮತ್ತೆ ಚಾಲನೆ ನೀಡಬೇಕೆಂದು ಆಗ್ರಹಿಸಿದರು.

ಕರ್ನಾಟಕದ ಬೆಳಗಾವಿ ಹಾಗೂ ಕಾರವಾರ ಜಿಲ್ಲೆಗಳಿಗೆ ಮಹಾರಾಷ್ಟ್ರದ ಅಂಗ ಎಂದು ಮಹಾ ಸಿಂಎಂ ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸಲಾಯಿತು. ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಕೈಹಾಕುವ ಈ ದುರಾಲೋಚನೆ ಕೈಬಿಡಬೇಕು. ಯಾವ ಕಾರಣಕ್ಕೂ ಬೆಳಗಾವಿ, ಕಾರವಾರ ಅಷ್ಟೇ ಅಲ್ಲ, ನಮ್ಮ ರಾಜ್ಯದ ಯಾವ ಹಳ್ಳಿಗಳನ್ನೂ ಬಿಟ್ಟುಕೊಡುವ ಮಾತೇ ಇಲ್ಲ. ಮಹಾರಾಷ್ಟ್ರ ಮತ್ತೆ ಉದ್ಧಟತನ ತೋರಿದರೆ ಉಗ್ರವಾದ ಹೋರಾಟ ಮಾಡುವುದಾಗಿ ಸಂಘಟಕರು ಉದ್ಧವ ಠಾಕ್ರೆಗೆ ಟಕ್ಕರ್ ನೀಡಿದ್ದಾರೆ.

ಈ ವೇಳೆ ಕೇಂದ್ರ ಸರ್ಕಾರದ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ನರೇಂದ್ರ ಮೋದಿ, ಕೇಂದ್ರ ಸಚಿವರ ಪ್ರತಿಕೃತಿ ದಹನ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

Comments

Leave a Reply

Your email address will not be published. Required fields are marked *