ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ – ಹೆಬ್ಬೆಟ್ಟು ಹಾಕಿಸಿಕೊಂಡು ರೇಷನ್ ನೀಡದ ವಿತರಕ

ಗದಗ: ಕಳೆದ ಮೂರು ತಿಂಗಳಿಂದ ರೇಷನ್ ನೀಡದೆ ಸತಾಯಿಸುತ್ತಿರುವ ನ್ಯಾಯಬೆಲೆ ಅಂಗಡಿ ವಿತರಕರ ವಿರುದ್ಧ ಫಲಾನುಭವಿಗಳು ಆಕ್ರೋಶಗೊಂಡಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.

ಬೆಟಗೇರಿ ವಲಯದ ನ್ಯಾಯಬೆಲೆ ಅಂಗಡಿ ಸಂಖ್ಯೆ 24, 26 ಹಾಗೂ 27 ಈ ಮೂರು ಅಂಗಡಿಗಳು ಒಂದೇ ಗೊದಾಮಿನಲ್ಲಿವೆ. ಆದರೆ ಕಳೆದ ಮೂರು ತಿಂಗಳಿಂದ ಇಲ್ಲಿ ಯಾವೊಬ್ಬ ಫಲಾನುಭವಿಗಳಿಗೆ ರೇಷನ್ ನೀಡುತ್ತಿಲ್ಲ. ಈ ವಾರ ಮುಂದಿನ ವಾರ ಎಂದು ಮುಂದೂಡ್ತಾ ಮೂರು ತಿಂಗಳು ಮಾಡಿದ್ದಾರೆ ಎಂದು ಜನರು ವಿತರಕರ ಮೇಲೆ ಕಿಡಿಕಾರಿದ್ದಾರೆ.

ಇದರಿಂದ ರೋಸಿಹೊದ ಸಾರ್ವಜನಿಕರು ರಾತ್ರಿಯಿಡಿ ಇಲ್ಲಿಯೇ ಉಳಿದು ವಿತರಕರು, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂಗಡಿ ಸಂಖ್ಯೆ 24 ರ ಗುತ್ತಿಗೆದಾರ ಎ.ಎ ದೇವರಡ್ಡಿ, 26ನೇ ಅಂಗಡಿ ಜನತಾ ಕಂಪನಿ ಸೊಸೈಟಿ ಹಾಗೂ 27ನೇ ಅಂಗಡಿ ಎಮ್.ಎಸ್ ರಕ್ಕಸಗಿ ಎಂಬ ಗುತ್ತಿಗೆದಾರರು ಅಕ್ಕಿ ವಿತರಣೆ ಮಾಡಬೇಕು. ಆದರೆ ಈ ಮೂವರ ಪಾಲಿನ ಪಡಿತರ ರೇಷನ್‍ನ್ನು ಗುರುಪಾದಯ್ಯ ಸ್ವಾಮಿ ಎಂಬುವರು ಹಂಚಿಕೆ ಮಾಡುತ್ತಾರೆ ಎಂದು ಆರೋಪ ಮಾಡಿದ್ದಾರೆ.

ನ್ಯಾಯಬೆಲೆ ಅಂಗಡಿನಲ್ಲಿ ಅನ್ಯಾಯವೇ ಹೆಚ್ಚಾಗುತ್ತಿದೆ. ಸರಿಯಾಗಿ ಹಂಚಿಕೆ ಮಾಡದೇ ಫಲಾನುಭವಿಗಳನ್ನು ಪ್ರತಿ ತಿಂಗಳು ಯಾಮಾರಿಸ್ತಾರೆ. ಕಳೆದ ಮೂರು ತಿಂಗಳಿಂದ ಫಲಾನುಭವಿಗಳಿಂದ ಥಂಬ್ ಹಾಕಿಸಿಕೊಂಡು ರೇಷನ್ ನೀಡಿಲ್ಲ. ಜೊತೆಗೆ ಪ್ರತಿ ತಿಂಗಳು ಕೊಡಬೇಕಾದ ಅಕ್ಕಿ ಫಲಾನುಭವಿಗೆ ನೀಡದೆ, ಕಾಳಸಂತೆಯಲ್ಲಿ ಮಾರಾಟವಾಗುತ್ತೆ ಎಂಬ ಆರೋಪ ಕೇಳಿ ಬರುತ್ತಿದೆ.

Comments

Leave a Reply

Your email address will not be published. Required fields are marked *