ಹೆಚ್ಚಿನ ಮಟ್ಟದ ರಫ್ತು ಉತ್ತೇಜನಕ್ಕೆ ಅಗತ್ಯ ಕ್ರಮ: ಗದಗ ಜಿಲ್ಲಾಧಿಕಾರಿ ಭರವಸೆ

ಗದಗ: ಹೆಚ್ಚಿನ ಮಟ್ಟದ ರಫ್ತು ಉತ್ತೇಜನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ರಫ್ತುದಾರರ ದತ್ತಾಂಶ ತಯಾರಿಸಿ, ಹೊಸ ರಫ್ತುದಾರರನ್ನು ಗುರುತಿಸಲಾಗುತ್ತದೆ. ಈ ಮೂಲಕ ಅವರಿಗೆ ಸೂಕ್ತ ತರಬೇತಿ ಕೊಡುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳ ರಫ್ತು ಮಾಡಲು ಸಹಾಯ ಸೌಲಭ್ಯ ನೀಡುವುದು ಜಿಲ್ಲಾ ರಫ್ತು ಉತ್ತೇಜನ ಸಮಿತಿಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ಜಿಲ್ಲಾಕಾರಿಗಳು ಉದ್ದಿಮೆದಾರರು ಹಾಗೂ ರಫ್ತುದಾರರಿಂದ ಅಹವಾಲು ಕೇಳಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದರು. ಜಿಲ್ಲೆಯಲ್ಲಿ ಉತ್ಪಾದಿಸಿದ ಈರುಳ್ಳಿ, ಮೆಣಸಿನಕಾಯಿ, ಶೇಂಗಾ, ಹತ್ತಿ ಮುಂತಾದ ಬೆಳೆಗಳ ತಾಂತ್ರಿಕ ಗುಣಮಟ್ಟದ ಪರಿಶೀಲನೆಗೆ ಅಗತ್ಯವಾದ ಪ್ರಯೋಗಾಲಯಗಳ ಹಾಗೂ ಕಾರ್ಖಾನೆಗಳ ಸೌಲಭ್ಯ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಕೈಗಾರಿಕೆ ಸ್ಪಂದನ ಸಭೆಗಳನ್ನು ನಡೆಸಲಾಗುತ್ತಿದೆ. ರಫ್ತುದಾರರ ಮೂಲಸೌಕರ್ಯ ಅಭಿವೃದ್ಧಿಗಾಗಿ ಹಾಗೂ ಅವರಿಗಿರುವ ತೊಂದರೆ ನಿವಾರಿಸಿ ರಫ್ತುದಾರರನ್ನು ಉತ್ತೇಜಿಸಲು ಕೈಗಾರಿಕಾ ಇಲಾಖೆ ಮುಂದಾಗಿದೆ ಎಂದರು.

ಜಿಲ್ಲೆಯಲ್ಲಿ ರಫ್ತು ಕೇಂದ್ರ ಸ್ಥಾಪನೆ, ರಫ್ತುದಾರರ ಜಿಎಸ್‍ಟಿ, ಸೆಸ್ ಮರುಪಾವತಿ, ರಫ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜಂಟಿ ಕೃಷಿ ನಿರ್ದೇಶಕ ರುದ್ರೇಶ, ಪರಿಸರ ಇಲಾಖೆಯ ಅಧಿಕಾರಿ ಬಿ.ರುದ್ರೇಶ, ವಿವಿಧ ರಂಗಗಳ ಉದ್ದಿಮೆದಾರರು, ಕೆ.ಎಸ್.ಎಫ್.ಸಿ ನಬಾರ್ಡ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *