ಸಚಿವ ಸಿ.ಸಿ.ಪಾಟೀಲ್‍ಗೆ ನೆರೆ ಸಂತ್ರಸ್ತ ಮಹಿಳೆಯಿಂದ ಕ್ಲಾಸ್

– ಒಂದು ಬುಟ್ಟಿ ಮಣ್ಣು ಹಾಕಲಿಕ್ಕೂ ಸರ್ಕಾರದಲ್ಲಿ ಹಣವಿಲ್ಲ

ಗದಗ: ಮಾಧ್ಯಮಗಳ ವರದಿಯಿಂದ ಎಚ್ಚೆತ್ತು ಪ್ರವಾಹ ಪ್ರದೇಶ ವೀಕ್ಷಣೆಗೆ ಬಂದಿದ್ದ ಜಿಲ್ಲಾ ಉಸ್ತವಾರಿ ಸಚಿವ ಸಿ.ಸಿ.ಪಾಟೀಲ್ ಅವರನ್ನು ನೆರೆ ಸಂತ್ರಸ್ತರು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ಜಿಲ್ಲೆಯಲ್ಲಿ ನಡೆದಿದೆ.

ಪ್ರವಾಹ ಪ್ರದೇಶ ವೀಕ್ಷಣೆಗೆ ಸಚಿವರು ರೋಣ ತಾಲೂಕಿನ ಹೊಳೆಆಲೂರ ಪಟ್ಟಣಕ್ಕೆ ಭೇಟಿ ನೀಡಿದರು. ಈ ವೇಳೆ ಸಚಿವರ ವಿರುದ್ಧ ಕಿಡಿಕಾರಿದ ಹೊಳೆಆಲೂರಿನ ನಿವಾಸಿ ಈರಮ್ಮ ಹೆಬ್ಬಳ್ಳಿ ಅವರು, ಇಷ್ಟು ದಿನ ಎಲ್ಲಿ ಹೋಗಿದ್ರಿ? ಈಗ ಯಾಕೆ ಬಂದ್ರಿ ಎಂದು ಪ್ರಶ್ನಿಸಿದರು. ಇದರಿಂದಾಗಿ ಗರಂ ಆದ ಸಚಿವರು, ಯಾರೋ ಹೇಳಿಕೊಟ್ಟಂತೆ ಮಾತನಾಡ ಬೇಡಿ. ರಸ್ತೆ ದುರಸ್ತಿ, ಮನೆ ದುರಸ್ತಿ ಆಮೇಲೆ ನೋಡುತ್ತೇವೆ. ಒಂದು ಬುಟ್ಟಿ ಮಣ್ಣು ಹಾಕಲಿಕ್ಕೂ ಸರ್ಕಾರದಲ್ಲಿ ಹಣವಿಲ್ಲ ಎಂದರು. ಇದನ್ನೂ ಓದಿ: ನಮಗೆ ಇರಲು ಮನೆ ಇಲ್ಲ, ಬಾಡಿಗೆ ಮನೆಯಲ್ಲಿ ಇದ್ದೇನೆ: ಸಿದ್ದುಗೆ ವೃದ್ಧೆ ತರಾಟೆ

ಈ ಮಧ್ಯೆ ಈರಮ್ಮ ಹೆಬ್ಬಳ್ಳಿ ಅಸಮಾಧಾನ ಹೊರಹಾಕುತ್ತಲೇ ಇದ್ದರು. ಆಗ ಸಚಿವರು, ನಾನು ಬೆಂಗಳೂರಿಗೆ ಹೋಗಬೇಕು. ಫ್ಲೈಟ್ ಮಿಸ್ ಆಗುತ್ತದೆ. ಟೈಂ ಇಲ್ಲ ಬೇಗ ಹೋಗಬೇಕು ಎಂದರು. ಇದರಿಂದ ಕೋಪಗೊಂಡ ನೆರೆ ಸಂತ್ರಸ್ತ ಮಹಿಳೆ, ಟೈಂ ಇಲ್ಲದಿದ್ದರೆ, ಬೆಂಗಳೂರಲ್ಲೇ ಕುಳಿತು ಮಾತನಾಡಿ, ನಾವು ಟಿವಿಯಲ್ಲೇ ನೋಡುತ್ತೇವೆ. ಇಲ್ಲಿಗ್ಯಾಕೆ ಬಂದ್ರಿ ಎಂದು ತರಾಟೆ ತೆಗೆದುಕೊಂಡರು. ಇದರಿಂದಾಗಿ ತಕ್ಷಣವೇ ಸಚಿವರು ಪಟ್ಟಣದಿಂದ ಕಾಲ್ಕಿತ್ತರು.

ಬೆಣ್ಣೆಹಳ್ಳ ಪ್ರವಾಹಕ್ಕೆ ಶ್ವಾನವೊಂದು ಕೊಚ್ಚಿಕೊಂಡು ಹೊಗಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಸುರಕೋಡ ಬಳಿ ನಡೆದಿದೆ. ನೋಡನೋಡುತ್ತಿದ್ದಂತೆ ಪ್ರವಾಸುರನ ಅಟ್ಟಹಾಸಕ್ಕೆ ನಾಯಿ ನೀರು ಪಾಲಾಗಿದೆ. ಸುರಕೋಡ ಗ್ರಾಮ ನಡುಗಡ್ಡೆಯಂತಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ನವಿಲುತೀರ್ಥ ಡ್ಯಾಂನಿಂದ ಮಲಪ್ರಭಾನದಿಗೆ ಅಪಾರ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಮನೆಗಳು, ಬಸ್ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿದ್ದು, ಸಂತ್ರಸ್ತರು ಮತ್ತೆ ಕಂಗಾಲಾಗಿದ್ದಾರೆ. ಮಲಪ್ರಭಾ ಪ್ರವಾಹಕ್ಕೆ ಕೊಣ್ಣೂರು, ಲಖಮಾಪುರ, ವಾಸನ, ಬೂದಿಹಾಳ ಗ್ರಾಮಗಳ ಜನಜೀವನ ಅಸ್ತವ್ಯಸ್ತವಾಗಿದೆ.

Comments

Leave a Reply

Your email address will not be published. Required fields are marked *