ಸದನದೊಳಗೆ ಮೈತ್ರಿ ಫೈಟ್ – ಬಿಜೆಪಿ ಪರ ಜಿಟಿಡಿ ಬ್ಯಾಟಿಂಗ್

ಬೆಂಗಳೂರು: ಸರ್ಕಾರ ಪತನವಾದ ಬಳಿಕ ಜೆಡಿಎಸ್, ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ಮಾತಿಗೆ ಪುಷ್ಠಿ ನೀಡುವಂತೆ ಇಂದು ಕಲಾಪದಲ್ಲಿ ದೋಸ್ತಿ ನಾಯಕರಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗಿ ಗೋಚರಿಸಿದೆ.

ಬಿಎಸ್ ಯಡಿಯೂರಪ್ಪನವರು ಇಂದು ಧನ ವಿಧೇಯಕವನ್ನು ಮಂಡಿಸಿದ ಬಳಿಕ ಪೂರಕ ಬಜೆಟ್ ಗೆ ಸದನದ ಒಪ್ಪಿಗೆ ಬೇಕೆಂದು ಕೇಳಿಕೊಂಡರು. ಮೂರು ತಿಂಗಳಿಗೆ ಧನ ವಿಧೇಯಕ್ಕೆ ಮುಂದಾಗಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಇದಾದ ಬಳಿಕ ಪೂರಕ ಬಜೆಟ್ ಚರ್ಚೆ ನಡೆಸದೇ ಒಪ್ಪಿಗೆ ನೀಡಲು ಸಾಧ್ಯವಿಲ್ಲ. ಬೇಕಿದ್ದರೆ ಮತ್ತೊಮ್ಮೆ ಸದನ ಕರೆಯಿರಿ ಚರ್ಚೆ ನಡೆಸೋಣ ಎಂದು ಹೇಳಿದರು.

ಸಿದ್ದರಾಮಯ್ಯ ಮಾತಿಗೆ ಯಡಿಯೂರಪ್ಪನವರು, ಸ್ವಾಮಿ ಇದು ನಿಮ್ಮ ಸರ್ಕಾರವೇ ಮಂಡಿಸಿದ ಪೂರಕ ಬಜೆಟ್. ನೀವೇ ಮಂಡಿಸಿದ ಬಜೆಟ್ ಚರ್ಚೆ ನಡೆಸಲು ಏನಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸಿದ್ದರಾಮಯ್ಯ ಒಳಗಡೆ ನೀವು ಏನು ಬದಲಾವಣೆ ಮಾಡಿದ್ದೀರಿ ಎನ್ನುವುದು ಹೇಗೆ ಗೊತ್ತಾಗಬೇಕು. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ನೀವು ಹೇಳುತ್ತೀರಿ. ಆದರೆ ಧನ ವಿಧೇಯಕವನ್ನು ಕೇವಲ ಮೂರು ತಿಂಗಳಿಗೆ ಮಾತ್ರ ಅನುಮೋದನೆ ಪಡೆದುಕೊಂಡಿದ್ದೀರಿ. 8 ತಿಂಗಳಿಗೆ ಪಡೆದುಕೊಳ್ಳಬಹುದಾಗಿತ್ತು. ಇಲ್ಲಿ ನೀವು ಏನು ಬದಲಾವಣೆ ಮಾಡಿದ್ದೀರಿ ಎನ್ನುವುದು ಗೊತ್ತಾಗಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಮಾಧುಸ್ವಾಮಿ ಮಾತನಾಡಿ, ಕೇಂದ್ರದಿಂದ ಎನ್‍ಡಿಆರ್‍ಎಫ್ ನಿಧಿ ಬಂದಿದೆ. ಅದನ್ನು ಬಳಸಬೇಕಾದರೆ ಸದನದ ಅನುಮತಿ ಬೇಕು. ರಾಜ್ಯದಲ್ಲಿ ಬರ ಇದೆ. ಹೀಗಾಗಿ ಬಂದಿರುವ ಹಣ ಬಳಸದೇ ಇದ್ದರೆ ಎಷ್ಟು ಸರಿಯಾಗುತ್ತದೆ. ಚರ್ಚೆ ನಡೆಸಬೇಕಾದರೆ ನಡೆಸೋಣ. ಇದು ನಮ್ಮ ವಿನಂತಿ ಸಿದ್ದರಾಮಯ್ಯನವರೇ ಎಂದು ಮನವಿ ಮಾಡಿಕೊಂಡರು.

ಒಪ್ಪಿಗೆ ಬಗ್ಗೆ ನಾಯಕರ ಮಧ್ಯೆ ಚರ್ಚೆ ನಡೆಯುತ್ತಿದ್ದಾಗ ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು, “ಮಾಡ್ಲೀ ಬಿಡ್ರೀ. ನಾವೇ ಮಂಡನೆ ಮಾಡಿರುವ ಬಜೆಟ್ ಅಲ್ವೇ ಇದು. ನಾವ್ಯಾಕೆ ಅಡ್ಡಿಯಾಗೋಣ” ಎಂದು ಪ್ರಶ್ನಿಸಿ ಬಿಜೆಪಿ ಪರ ಬ್ಯಾಟಿಂಗ್ ಮಾಡಿದರು. ಕೂಡಲೇ ಯಡಿಯೂರಪ್ಪನವರು ನಿಮ್ಮ ಸರ್ಕಾರದ ಜಿಟಿ ದೇವೇಗೌಡರೇ ಹೇಳಿದ ಮೇಲೆ ಮತ್ತೆ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಚರ್ಚೆಯಾಗದೇ ಪೂರಕ ಬಜೆಟ್ ಮಂಡಿಸುವುದು ಸರಿಯಲ್ಲ. ಇದು ಒಳ್ಳೆಯ ಸಂಪ್ರದಾಯ ಮಾತ್ರ ಅಲ್ಲ ಎಂದು ಹೇಳಿದರು.

ಸಿದ್ದರಾಮಯ್ಯನವರ ಮಾತಿಗೆ ರಮೇಶ್ ಕುಮಾರ್, ಸರಿ ಈಗ ಏನು ಮಾಡೋಣ ಎಂದಾಗ ಸಿದ್ದರಾಮಯ್ಯ ಎಲ್ಲರ ಒಪ್ಪಿಗೆ ಇದೆ ಎಂದರೆ ನನ್ನ ಅಭ್ಯಂತರ ಏನು ಇಲ್ಲ. ಪಾಸ್ ಮಾಡಿ ಎಂದು ಹೇಳಿ ಅನುಮತಿ ಕೊಟ್ಟರು.

ಜೈಪಾಲ್ ರೆಡ್ಡಿ ಅವರ ಅಂತ್ಯ ಸಂಸ್ಕಾರ ಕಾರ್ಯಕ್ರಮಕ್ಕೆ ತೆರಳಬೇಕಿದೆ. ಹೀಗಾಗಿ ಸದನವನ್ನು ಬೇಗನೇ ಮುಗಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಆರಂಭದಲ್ಲೇ ಹೇಳಿ ಸದಸ್ಯರಲ್ಲಿ ಮನವಿ ಮಾಡಿಕೊಂಡರು. ಸದಸ್ಯರ ನಡುವೆ ಚರ್ಚೆ ಜಾಸ್ತಿಯಾದಾಗ ಈ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡುತ್ತಿದ್ದರು. ಹೀಗಾಗಿ ಇಂದು ಸದನದಲ್ಲಿ ಜಾಸ್ತಿ ಚರ್ಚೆಯಾಗದೇ ಧನ ವಿಧೇಯಕ ಮತ್ತು ಪೂರಕ ಬಜೆಟ್ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿತು.

Comments

Leave a Reply

Your email address will not be published. Required fields are marked *