ಬಿಎಸ್‍ವೈ ಪಾದಾರ್ಪಣೆಯಾದ ಕೂಡಲೇ ನದಿಗಳೆಲ್ಲ ತುಂಬಿ ಸಮೃದ್ಧಿ, ಹಸಿರು ಬಂತು: ಜಿಟಿಡಿ

ಮೈಸೂರು: ಯಡಿಯೂರಪ್ಪ ಅವರು ಮೂರು ಬಾರಿ ಸಿಎಂ ಆದ ರಾಜ್ಯದ ಏಕೈಕ ಸಿಎಂ. ಅವರ ಪಾದಾರ್ಪಣೆಯಾದ ಕೂಡಲೇ ನದಿಗಳೆಲ್ಲ ತುಂಬಿ ಸಮೃದ್ಧಿ, ಹಸಿರು ತುಂಬಿತೆಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹಾಡಿ ಹೊಗಳಿದ್ದಾರೆ.

ದಸರಾ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರನ್ನು ಹೊಗಳಿದ್ದಾರೆ. ಪಾದಾರ್ಪಣೆಯಾದ ಕೂಡಲೇ ನದಿಗಳೆಲ್ಲ ತುಂಬಿ ಸಮೃದ್ಧಿ, ಹಸಿರು ತುಂಬಿತೆಂದು ಹೇಳಿದ್ದಾರೆ. ಬರಗಾಲ ಉಂಟಾದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಸಿಎಂ ಆದರು. ಮಳೆಗಾಗಿ ಪೂಜೆ ಮಾಡ್ತಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಪಾದಾರ್ಪಣೆ ಆದ ಕೂಡಲೇ ನದಿಗಳೆಲ್ಲ ತುಂಬಿ ಸಮೃದ್ಧಿ, ಹಸಿರು ತುಂಬಿತು. ಕೆಲ ಕಡೆ ಅತಿವೃಷ್ಟಿ ಬಂದಿದೆ. ಅವರ ನೆರವಿಗೆ ಸರ್ಕಾರ ನಿಂತಿದೆ. ಯಡಿಯೂರಪ್ಪ ಹೋರಾಟಗಾರ, ಅವರ ಒಳ್ಳೆ ಮನಸ್ಸಿನಿಂದ ಈ ರಾಜ್ಯದಲ್ಲಿ ಸಮೃದ್ಧಿ ಬಂತು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಂಪುಟ ರಚನೆ ಆಗದಿದ್ದರೂ ಏಕಾಂಗಿಯಾಗಿ ಸಿಎಂ ನೆರೆ ಸಂತ್ರಸ್ತರ ಕಷ್ಟ ಆಲಿಸಿದರು. ಅವರಿಗೆ ಚಾಮುಂಡಿ ದೇವತೆ ಹೆಚ್ಚಿನ ಶಕ್ತಿ ಕೊಡಲಿ. ನಾನು ರಾಜಕೀಯವಾಗಿ ಈ ಮಾತುಗಳನ್ನು ಹೇಳುತ್ತಿಲ್ಲ, ವಾಸ್ತವ ಹೇಳುತ್ತಿದ್ದೇನೆ ಎಂದು ಬಿಎಸ್‍ವೈ ಪರ ಬ್ಯಾಟ್ ಬೀಸಿದರು.

ಸಿಎಂ ಅವರು ಇನ್ನೂ ಮೂರೂವರೆ ವರ್ಷ ಅಧಿಕಾರ ಮಾಡಲಿ. ಅವರು ಯಶಸ್ವಿ ಸಿಎಂ ಆಗಲಿ ಎಂದು ಇಡೀ ಭಾಷಣದ ಉದ್ದಕ್ಕೂ ಯಡಿಯೂರಪ್ಪ ಅವರನ್ನು ಜಿ.ಟಿ. ದೇವೇಗೌಡರು ಹೊಗಳಿದರು. ಮೈಸೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬೆಂಗಳೂರಿಗೆ ಪರ್ಯಾಯವಾಗಿ ಮೈಸೂರನ್ನು ಬೆಳೆಸಬೇಕು. ಹಾಸನಕ್ಕೆ ಬಂದ ಅನುದಾನ ಮೈಸೂರಿಗೆ ಬಂದಿಲ್ಲ. ಯಡಿಯೂರಪ್ಪ ಅವರು ಮೈಸೂರನ್ನು ಅಭಿವೃದ್ಧಿ ಮಾಡಬೇಕು ಎಂದು ಕೋರಿದರು.

Comments

Leave a Reply

Your email address will not be published. Required fields are marked *