ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದೇನೆ, ಪತ್ನಿ-ಮಕ್ಕಳಿಗೆ ಟಾರ್ಚರ್ ಕೊಡ್ಬೇಡಿ: ರಮೇಶ್

ಬೆಂಗಳೂರು: ಮರ್ಯಾದೆಗೆ ಅಂಜಿ ನಾನು ಆತ್ಮಹತ್ಯೆಗೆ ಶರಣಾಗಿದ್ದೇನೆ. ನನ್ನ ಹೆಂಡತಿ, ಮಕ್ಕಳಿಗೆ ಟಾರ್ಚರ್ ಕೊಡಬೇಡಿ ಎಂದು ಡೆತ್ ನೋಟ್ ಬರೆದಿಟ್ಟು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೊನ್ನೆ ನನ್ನ ಮನೆಯಲ್ಲಿ ನಡೆದ ಐಟಿ ದಾಳಿಯಿಂದ ನಾನು ದಿಗ್ಭ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಬಡವರು ಬಡವರಾಗಿಯೇ ಉಳಿಯಬೇಕೆಂಬ ಸಂಸ್ಕೃತಿಯಿಂದ ತುಂಬಾ ಬೇಜಾರಾಗಿದ್ದೇನೆ. ಐಟಿ ಅಧಿಕಾರಿಗಳೇ ನನ್ನ ಹೆಂಡತಿ, ಮಕ್ಕಳಿಗೆ ತೊಂದರೆ ಕೊಡಬೇಡಿ ಎಂದು ರಮೇಶ್ ಡೆತ್ ನೋಟ್‍ನಲ್ಲಿ ಮನವಿ ಮಾಡಿದ್ದಾರೆ.

ಸೌಮ್ಯ ನನ್ನನ್ನು ಕ್ಷಮಿಸು, ಮಕ್ಕಳನ್ನು ಚೆನ್ನಾಗಿ ನೋಡಿಕೋ, ಲಕ್ಷ್ಮಿದೇವಿ, ಪದ್ಮಾ, ಸತೀಶ ನಿಮ್ಮೊಂದಿಗೆ ಹುಟ್ಟಿ ನಿಮಗೆ ಸಹಾಯ ಮಾಡಬೇಕೆಂಬ ನನ್ನ ಆಸೆ ಇಂದಿಗೆ ಕಮರಿದೆ. ನನ್ನ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ವಿಎಸ್‍ಎಸ್ ವಿದ್ಯಾಸಂಸ್ಥೆಗೆ ಕೃತಜ್ಞನಾಗಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ನಿಮ್ಮನ್ನು ಸಾಕಬೇಕಿದ್ದ ನಾನು ಹೋಗುತ್ತಿದ್ದೇನೆ ಕ್ಷಮಿಸಿ ಎಂದು ತಮ್ಮ ಕುಟುಂಬಸ್ಥರಿಗೆ ಧನ್ಯವಾದ ಹಾಗೂ ಕ್ಷಮೆ ಕೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಜಿ.ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಆಗ ರಮೇಶ್ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೆ ರಮೇಶ್ ಅವರನ್ನು ಸ್ವಲ್ಪ ಹೊತ್ತು ವಿಚಾರಣೆ ನಡೆಸಿದ್ದರು. ಇದರಿಂದ ರಮೇಶ್ ಬೇಸರಗೊಂಡಿದ್ದರು. ಅಲ್ಲದೆ ಐಟಿ ವಿಚಾರಣೆ ಎದುರಿಸುವುದಕ್ಕೆ ನನ್ನಿಂದ ಆಗಲ್ಲ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ಇಂದು ಬೆಳಗ್ಗೆ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಮೇಶ್ 6 ವರ್ಷದಿಂದ ಪರಮೇಶ್ವರ್ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಆದ ಹಿನ್ನೆಲೆಯಲ್ಲಿ ರಮೇಶ್ ಮನೆ ಮೇಲೂ ದಾಳಿ ನಡೆದಿತ್ತು. ಆದರೆ ಮನೆಯಲ್ಲಿ ಯಾವುದೇ ದಾಖಲೆ ಸಿಕ್ಕಿರಲಿಲ್ಲ. ಪರಮೇಶ್ವರ್ ಪತ್ರ ವ್ಯವಹಾರದ ಬಗ್ಗೆ ರಮೇಶ್‍ಗೆ ತಿಳಿದಿತ್ತು. ಹಾಗಾಗಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಪತ್ರ ವ್ಯವಹಾರದ ಬಗ್ಗೆ ಐಟಿ ಅಧಿಕಾರಿಗಳು 2 ದಿನ ವಿಚಾರಣೆ ನಡೆಸಿದ್ದರು. ಈ ವೇಳೆ ಐಟಿ ಅಧಿಕಾರಿಗಳು ಜೈಲಿಗೆ ಹೋಗ್ತೀಯಾ, ಈಗಾಗಲೇ ನಮಗೆ ಹವಾಲಾ ದಂಧೆ ಸಾಕ್ಷ್ಯ ಸಿಕ್ಕಿದೆ ಎಂದು ಬೆದರಿಕೆ ಹಾಕಿದ್ದರು. ಇದರಿಂದ ರಮೇಶ್ ಹೆದರಿಕೊಂಡಿದ್ದರು ಎನ್ನಲಾಗಿದೆ.

ಇಂದು ಬೆಳಗ್ಗೆ ರಮೇಶ್ ತನ್ನ ಆಪ್ತರಿಗೆ ಕರೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿ ಕೊಂಡಿದ್ದರು. ಇಬ್ಬರು ಆಪ್ತರ ಬಳಿ ಮಾತನಾಡಿ, ನಾನು ಯೂನಿವರ್ಸಿಟಿ ಕ್ಯಾಂಪಸ್‍ನಲ್ಲಿದ್ದೀನಿ ಎಂದು ಹೇಳಿ ರಮೇಶ್ ನಾಪತ್ತೆ ಆಗಿದ್ದರು.

Comments

Leave a Reply

Your email address will not be published. Required fields are marked *