ಮೃತ ಪಿಎಸ್ಐ ಮನೆಗೆ ಗೃಹ ಸಚಿವರ ಭೇಟಿ – ಪತ್ನಿಗೆ ಉದ್ಯೋಗ, 50 ಲಕ್ಷ ಪರಿಹಾರ ಘೋಷಣೆ

– ವರ್ಗಾವಣೆ ಆದೇಶ ಮಾಡಿದ ಅಧಿಕಾರಿ ಸಮರ್ಥಿಸಿದ ಸಚಿವ

ಯಾದಗಿರಿ: ಪಿಎಸ್ಐ ಪರಶುರಾಮ್ (PSI Parashuram) ಸಾವು ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸ್ವತಃ ಗೃಹ ಸಚಿವ ಜಿ.ಪರಮೇಶ್ವರ್‌, ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ, ಪತ್ನಿ ಶ್ವೇತಾ ಅವರಿಗೆ ಉದ್ಯೋಗ ನೀಡುವ ಜೊತೆಗೆ, ಕುಟುಂಬಕ್ಕೆ 50 ಲಕ್ಷ ರೂ. ವಿಶೇಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.

ಪರಶುರಾಮ್ ಹುಟ್ಟೂರು ಕೊಪ್ಪಳದ (Koppal) ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಆಗಮಿಸಿದ ಗೃಹ ಸಚಿವರು, ಮೃತರ ತಂದೆ-ತಾಯಿ ಹಾಗೂ ಪತ್ನಿ ಶ್ವೇತಾ ಅವರ ಜೊತೆಗೆ ಸುಮಾರು 1 ಗಂಟೆ ಕಾಲ ಚರ್ಚಿಸಿದರು. ತಂದೆ ಜನಕಮುನಿ, ತಾಯಿ ಗಂಗಮ್ಮ ಮಗನ ಸಾವಿನ ನೋವು ತೋಡಿಕೊಂಡರು. ನಮ್ಮ ಮಗನ ಸಾವಿಗೆ ನ್ಯಾಯಾ ಸಿಗಬೇಕು ಎಂದು ಒತ್ತಾಯಿಸಿದರು. ಸಹೋದರ ಹನುಮಂತಪ್ಪ ಮತ್ತು ಪತ್ನಿ ಶ್ವೇತಾ ಅವರೊಂದಿಗೆ ಪ್ರತ್ಯೇಕವಾಗಿ ‌ಚರ್ಚಿಸಿದ ಗೃಹ ಸಚಿವರು, ಪರಶುರಾಮ್ ಸಾವಿಗೆ ನ್ಯಾಯ ದೊರಕಿಸಿಕೊಡುವ ಜೊತೆಗೆ ಸೂಕ್ತ ಪರಿಹಾರ ‌ನೀಡುವುದಾಗಿ ತಿಳಿಸಿದರು. ಮಾನವೀಯತೆ ಆಧಾರದ ಮೇಲೆ‌ ನೀಡುವ ಉದ್ಯೋಗವನ್ನು ಪೊಲೀಸ್ ಇಲಾಖೆ ಬದಲಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಥವಾ ಜೆಸ್ಕಾಂನಲ್ಲಿ ವಿದ್ಯಾರ್ಹತೆಗೆ ತಕ್ಕಂತೆ ನೀಡಬೇಕು ಎಂದು ಪತ್ನಿ ಮತ್ತು ಆಕೆ ಪಾಲಕರು ಮನವಿ ಮಾಡಿದರು.‌ ಇದನ್ನೂ ಓದಿ: PSI ಪರಶುರಾಮ್‌ ಸಾವು ಪ್ರಕರಣ: ಸರ್ಕಾರ ತನಿಖೆಗೆ ವಹಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ತಂಡ ಎಂಟ್ರಿ

ನಂತರ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್‌ (G.Parameshwar), ಪಿಎಸ್ಐ ಪರಶುರಾಮ್ ಸಾವಿನ ನಂತರ ಈಗಾಗಲೇ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ವಿಧಿವಿಜ್ಞಾನ ಸಂಸ್ಥೆಯ ವರದಿಯ ನಿರೀಕ್ಷೆಯಲ್ಲಿದ್ದೇವೆ. ಈ ಸಾವು ಗೃಹ ಸಚಿವನಾಗಿ ನನಗೆ ನೋವು ತರಿಸಿದೆ. ಇಡೀ ಕುಟುಂಬದ ಜವಾಬ್ದಾರಿ ಮೃತ ಪರಶುರಾಮ್ ಮೇಲೆ ಇತ್ತು. ಅವರ ಅಗಲುವಿಕೆ ಇಡೀ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ. ತನಿಖಾ ವರದಿ ಆಧರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೃಷಿ ವಿವಿ ಅಥವಾ ಜೆಸ್ಕಾಂನಲ್ಲಿ ಕೆಲಸ ನೀಡುವಂತೆ ಪತ್ನಿ ಶ್ವೇತಾ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡಿ,‌ ಅವರ ಬೇಡಿಕೆ ಈಡೇರಿಸಲು ಪ್ರಯತ್ನ ಮಾಡುತ್ತೇನೆ. ಕುಟುಂಬಕ್ಕೆ 50 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡುತ್ತಿದ್ದೇನೆ. ಸಿಎಂ ಜೊತೆಗೆ ಚರ್ಚೆ ಮಾಡಿ, ಕೂಡಲೇ ಬಿಡುಗಡೆ ಮಾಡಿಸುತ್ತೇನೆ ಎಂದು ತಿಳಿಸಿದರು.

ತನಿಖಾ ವರದಿ ಬರಲಿ: ಯಾದಗಿರಿ ಶಾಸಕ ಮತ್ತು ಅವರ ಮಗ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪರಶುರಾಮ್ ಕುಟುಂಬ ಆರೋಪ ಮಾಡಿದೆ. ಈ ಹಿನ್ನೆಲೆ ಕೂಡಲೇ ಸಿಒಡಿಗೆ ತನಿಖೆಗೆ ಆದೇಶ ಮಾಡಿದ್ದೇನೆ. ಹಣ ಪಡೆದು ವರ್ಗಾವಣೆ ಮಾಡುವುದು ನಮ್ಮ ಸರ್ಕಾರದಲ್ಲಿ ಇಲ್ಲ. ಕನಿಷ್ಠ 2 ವರ್ಷ ವರ್ಗಾವಣೆ ಮಾಡಬಾರದು ಎಂದು ನಿಯಮ ಮಾಡಿದ್ದೇವೆ. ಆದಾಗ್ಯೂ ಪರಶುರಾಮನನ್ನು ಏಕೆ ವರ್ಗಾವಣೆ ‌ಮಾಡಲಾಗಿದೆ ಎಂಬುದು ಸಿಒಡಿ ತನಿಖೆಯಲ್ಲೇ ಗೊತ್ತಾಗಬೇಕಿದೆ. ಅಲ್ಲಿಯವರೆಗೂ ನಾವು ಕಾದು ನೋಡುತ್ತೇವೆ ಎಂದರು. ಇದನ್ನೂ ಓದಿ: ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ