ಮಿನರ್ವ ಮಿಲ್‍ಗೆ ಬಾರದವರು ಮುಂಬೈಗೆ ಬರಲು ಸಾಧ್ಯವೇ – ರಕ್ಷಿತಾ ಕಾಲೆಳೆದ ಸುದೀಪ್

 ಬೆಂಗಳೂರು: ದಬಾಂಗ್ 3 ಚಿತ್ರದಲ್ಲಿ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಜೊತೆ ಕಿಚ್ಚ ಸುದೀಪ್ ನಟಿಸುತ್ತಿದ್ದು, ಸೆಟ್ ಗೆ ನಿರ್ದೇಶಕ ಪ್ರೇಮ್ ಅವರನ್ನು ಕರೆ ತಂದಿದ್ದಕ್ಕೆ ನಟಿ ರಕ್ಷಿತಾ ಕಿಚ್ಚನ ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ಮೂಲಕ ಸುದೀಪ್ ಅವರು ರಕ್ಷಿತಾ ಕಾಲೆಳೆದಿದ್ದಾರೆ.

ನೀವು ಪ್ರೇಮ್ ಅವರನ್ನು ಮಾತ್ರ ಸೆಟ್ ಗೆ ಕರೆದಿದ್ದೀರಿ ನನ್ನನ್ನು ಯಾಕೆ ಕರೆದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸುದೀಪ್ ಕಾಲೆಳೆದಿದ್ದಾರೆ. ಈ ಟ್ವೀಟ್ ಗೆ ಕಿಚ್ಚ ಕೂಡ ರೀಟ್ವೀಟ್ ಮಾಡಿ ತಮಾಷೆಯಾಡಿದ್ದಾರೆ.

ರಕ್ಷಿತಾ ಹೇಳಿದ್ದೇನು?:
ಗೆಳೆಯ ಕಿಚ್ಚ ಸುದೀಪ್ ಅವರು ನನ್ನ ನೆಚ್ಚಿನ ನಟ ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸೆಟ್ ಗೆ ಪ್ರೇಮ್ ಅವರನ್ನು ಆಹ್ವಾನಿಸಿದ್ದಾರೆ. ಆದರೆ ನನ್ನ ಮಾತ್ರ ಕರೆದಿಲ್ಲ. ನಿಮಗೆ ನಾನೇನು ಮಾಡಿದ್ದೇನೆ ಎಂದು ಹೇಳಿ. ನಾನು ಅಳುತ್ತಿದ್ದೇನೆ. ಆದರೂ ಒಬ್ಬಳು ಒಳ್ಳೆಯ ಗೆಳತಿಯಾಗಿ ಚಿತ್ರಕ್ಕೆ ಶುಭ ಹಾರೈಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಸುದೀಪ್ ಪ್ರತಿಕ್ರಿಯೆ:
ಪತಿ ನಿದೇರ್ಶಿಸಿದ್ದ ವಿಲನ್ ಚಿತ್ರ 2 ವರ್ಷ ಶೂಟಿಂಗ್ ನಡೆದಿದ್ದ ಸಂದರ್ಭದಲ್ಲಿ ನನ್ನ ನಟನೆ ನೋಡಲು ಒಮ್ಮೆಯೂ ಶೂಟಿಂಗ್ ಸೆಟ್ ಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಚಂದ್ರ ಲೇಔಟಿನಿಂದ ಮಿನರ್ವ ಮಿಲ್ ಗೆ ಬಾರದೇ ಇದ್ದವರು ಇನ್ನು ಮುಂಬೈಗೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದ ಕಿಚ್ಚ, ಹೀಗಾಗಿ ಸುಮ್ನೆ ನಿಮಗೆ ತೊಂದರೆ ಯಾಕೆ ಎಂದು ಸೆಟ್ ಗೆ ಆಹ್ವಾನಿಸಿಲ್ಲ ಎಂದು ತಮಾಷೆಯಾಡಿದ್ದಾರೆ.

ಸಲ್ಲುಗೆ ಕಿಚ್ಚ ಧನ್ಯವಾದ:
ಸಿನಿಮಾ ಸೆಟ್ ನಲ್ಲಿ ತನ್ನ ಉಪಚರಿಸಿದ ಸಲ್ಮಾನ್ ಖಾನ್ ಗೆ ಕಿಚ್ಚ ಸುದೀಪ್ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ, ಬಿಸಿಲ ಬೇಗೆ ಜಾಸ್ತಿ ಇದ್ದರೂ ಸೆಟ್‍ನಲ್ಲಿ ಉತ್ಸಾಹದ ಮೇಲೆ ಅದು ಪ್ರಭಾವ ಬೀರಿಲ್ಲ. ಇದು ರೋಮಾಂಚಕ ದಿನ, ಅದ್ಭುತ ತಂಡ, ಅತ್ಯದ್ಭುತ ಜನ. ಹಾಗೆಯೇ ಇಲ್ಲಿರುವ ಮನಮೋಹಕ ಜಿಮ್ ಒಂದು ರೀತಿ ಬೋನಸ್ ಸಿಕ್ಕ ಹಾಗೆ. ದಬಾಂಗ್ 3 ಚಿತ್ರದ ಮೊದಲ ದಿನ ಖುಷಿ ಖುಷಿಯಾಗಿ ಆರಂಭವಾಗಿದೆ. ನನಗೆ ನನ್ನ ಮನೆಯಲ್ಲಿದ್ದೇನೆ ಎನ್ನುವ ರೀತಿ ನೋಡಿಕೊಳ್ಳುತ್ತಿರುವುದಕ್ಕೆ ಸಲ್ಮಾನ್ ಖಾನ್ ಸರ್ ಗೆ ಧನ್ಯವಾದಗಳು ಎಂದು ಬರೆದುಕೊಂಡು ಸಲ್ಮಾನ್ ಖಾನ್ ಹಾಗೂ ದಬಾಂಗ್ 3ಗೆ ಟ್ಯಾಗ್ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ `ರಕ್ತ ಚರಿತ್ರ 2’ರ ನಂತರ ಸುದೀಪ್ ಹಿಂದಿ ಚಿತ್ರರಂಗಕ್ಕೆ ಹಿಂದಿರುಗುವುದಕ್ಕೆ ದಬಾಂಗ್ 3 ಒಳ್ಳೆಯ ಅವಕಾಶ ನೀಡಿದೆ. ವರದಿಗಳ ಪ್ರಕಾರ, ಸುದೀಪ್ ಕಾಪ್-ಆಕ್ಷನ್‍ನ 3ನೇ ಕಂತಿನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಇದನ್ನು ಪ್ರಭುದೇವ್ ನಿರ್ದೇಶಿಸಲಿದ್ದಾರೆ.

Comments

Leave a Reply

Your email address will not be published. Required fields are marked *