ಸುನೀತಾ ವಿಲಿಯಮ್ಸ್‌ ಇನ್ನೂ 6 ತಿಂಗಳು ಭೂಮಿಗೆ ಬರಲ್ಲ – ಅಲ್ಲಿವರೆಗೂ ಗಗನಯಾನಿಗಳಿಗೆ ಆಹಾರ ವ್ಯವಸ್ಥೆ ಹೇಗೆ?

ವಾಷಿಂಗ್ಟನ್‌: ಕಳೆದ ಜೂನ್‌ 5ರಂದು ಬಾಹ್ಯಾಕಾಶಕ್ಕೆ (Space) ತೆರಳಿದ್ದ ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಒಂದು ವಾರದ ಅವಧಿಗೆಂದು ಹೋದ ಅವರು ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಉಳಿಯಲಿದ್ದಾರೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಸದ್ಯ ಸುನೀತಾ ವಿಲಿಯಮ್ಸ್‌ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ (Butch Wilmore) ತಾಂತ್ರಿಕ ದೋಷದಿಂದಾಗಿ ಬಾಹ್ಯಕಾಶದಲ್ಲೇ ಸಿಲುಕಿಕೊಂಡಿದ್ದಾರೆ. ಈ ಇಬ್ಬರು ಗಗನಯಾತ್ರಿಗಳು ಮುಂದಿನ ವರ್ಷ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಹೇಳಿದೆ. ಮುಂದಿನ ಫೆಬ್ರವರಿಯಲ್ಲಿ ಬುಚ್ ಮತ್ತು ಸುನಿತಾ ಕ್ರ್ಯೂ-9 ರೊಂದಿಗೆ ಹಿಂತಿರುಗುತ್ತಾರೆ ಮತ್ತು ಸ್ಟಾರ್ಲೈನರ್ ಸಿಬ್ಬಂದಿಯಿಲ್ಲದೇ ಹಿಂತಿರುಗುತ್ತಾರೆ ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. ಬೋಯಿಂಗ್ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಅಸಮರ್ಪಕ ಕಾರ್ಯಗಳಿಂದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ಹಿಂತಿರುಗುವುದು ವಿಳಂಬವಾಗಿದೆ ಎಂದು ಅವರು ಹೇಳಿದ್ದಾರೆ.

ಆಹಾರ ವ್ಯವಸ್ಥೆ ಹೇಗೆ?
ಸದ್ಯ ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಉಳಿಯಲಿರುವ ಗಗನ ಯಾನಿಗಳಿಗೆ ಆಹಾರ ಪೂರೈಕೆ ಹೇಗೆ ಸಾಧ್ಯ ಎನ್ನುವುದರ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದೆ. ಇದಕ್ಕೆ ನಾಸಾ ಮಾಸ್ಟರ್‌ ಪ್ಲ್ಯಾನ್‌ ಸಹ ಮಾಡಿಕೊಂಡಿದೆ. ಹೌದು. ಮಾನವ ಸಹಿತ ನೌಕೆಯ ಉಡ್ಡಯನ ಸಾಧ್ಯವಾಗದೇ ಇದ್ದರೂ, ಸರಕು ಸಾಗಾಣೆಗೆ ಇರುವ ನೌಕೆಗಳು ಬಾಹ್ಯಾಕಾಶ ಕೇಂದ್ರಕ್ಕೆ ಆಗಾಗ್ಗೆ ಹೋಗಿಬರುತ್ತವೆ. ಅದರ ಮೂಲಕವೇ ಸುನೀತಾ ಹಾಗೂ ವಿಲ್ಮೋರ್‌ ಅವರಿಗೆ ಆಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲು ನಾಸಾ ನಿರ್ಧರಿಸಿದೆ.

ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕಳೆದ ಜೂನ್‌ 5ರಂದು ಆರಂಭಿಸಿದ್ದರು. ಜೂನ್‌ 6ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ ತಲುಪಿದ್ದ ಅವರು 1 ವಾರ ಸಂಶೋಧನೆ ನಡೆಸಿ ವಾಪಸಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅವರು ಅಲ್ಲಿಯೇ ಸಿಲುಕಿದ್ದಾರೆ. ಇವರು ಯಾವಾಗ ಬರುತ್ತಾರೆ ಎಂಬುದರ ಕುರಿತು ನಾಸಾ ಈಗ ಮಾಹಿತಿ ನೀಡಿದೆ.