ಲಿಫ್ಟ್ ಕೊಡುವ ನೆಪದಲ್ಲಿ ಸ್ನೇಹಿತೆಯನ್ನ ಅಪಹರಿಸಿ ಗ್ಯಾಂಗ್‍ರೇಪ್

– ಅತ್ಯಾಚಾರ ಎಸಗಿ, ತಲೆಗೆ ರಾಡ್‍ನಿಂದ ಹೊಡೆದ ಪಾಪಿಗಳು
– ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನ ಎಸೆದು ಹೋದ್ರು

ಲಕ್ನೋ: ಎಂಬಿಎ ವಿದ್ಯಾರ್ಥಿನಿಯನ್ನು ಸ್ನೇಹಿತರೇ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ, ಮಾರಣಾಂತಿಕ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.

ಮೀರತ್‍ನ ಚೌಧರಿ ಚರಣ್‍ಸಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಒಳಗಾದ ಯುವತಿ. ಆರೋಪಿಗಳು ಲಿಫ್ಟ್ ನೀಡುವ ನೆಪದಲ್ಲಿ ಅಪಹರಿಸಿ, ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕ್ರೂರಿಗಳು ವಿದ್ಯಾರ್ಥಿನಿಯ ಮೇಲೆ ಹಲ್ಲೆಗೈದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಗ್ರಾಮವೊಂದರ ಬಳಿ ಎಸೆದು ಹೋಗಿದ್ದರು. ವಿದ್ಯಾರ್ಥಿನಿ ಈಗ ಗಂಭೀರ ಸ್ಥಿತಿಯಲ್ಲಿದ್ದು, ಆಕೆಯನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ವಿದ್ಯಾರ್ಥಿನಿ ಫೆಬ್ರವರಿ 13ರಂದು ಮೀರತ್‍ನಿಂದ ಮನೆಗೆ ಹೋಗುತ್ತಿದ್ದಳು. ಈ ವೇಳೆ ವಿದ್ಯಾರ್ಥಿನಿಗೆ ಬಸ್ ಮಿಸ್ ಆಗಿತ್ತು. ಆಗ ಕೆಲ ಪರಿಚಿತ ವಿದ್ಯಾರ್ಥಿಗಳು ಲಿಫ್ಟ್ ಕೊಡುವುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ನಂತರ ಆಕೆಯನ್ನು ಅಪಹರಿಸಿ ಬುಲಂದ್‍ಶಹರ್ ನ ಸೈನಾ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ರಾಡ್‍ನಿಂದ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿದ್ದಾರೆ.

ಇತ್ತ ಕತ್ತಲಾದರೂ ಮನೆಗೆ ಬರಲಿಲ್ಲ ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ ಬಸ್ ನಿಲ್ದಾಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿನಿ ಕಾರಿನಲ್ಲಿ ಹೋಗಿರುವುದು ಖಚಿತವಾಗಿತ್ತು. ಬಳಿಕ ಕಾರು ಹೋದ ಮಾರ್ಗದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ಸೈನಾ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯೊಂದರ ಬಳಿ ವಿದ್ಯಾರ್ಥಿನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಚಿಕಿತ್ಸೆ ಬಳಿಕ ಸ್ವಲ್ಪ ಚೇತರಿಸಿಕೊಂಡಿರುವ ಸಂತ್ರಸ್ತೆ, ನಾಲ್ವರು ಆರೋಪಿಗಳು ನನಗೆ ಪರಿಚಯವಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಲಿಫ್ಟ್ ಕೊಡುವುದಾಗಿ ಕೇಳಿದಾಗ, ನಾನು ಒಪ್ಪಿ ಅವರೊಂದಿಗೆ ಹೋದೆ. ಆದರೆ ಅವರು ನನ್ನ ಮುಖಕ್ಕೆ ರಾಡ್‍ನಿಂದ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ಸಂತ್ರಸ್ತೆ ಪರಿಯಚವಿದ್ದ ಕಾರಣಕ್ಕೆ ಆರೋಪಿಗಳ ಜೊತೆ ಹೋಗಿದ್ದಾಳೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *