ನನ್ನ ಸ್ಥಿತಿ ಯಾರಿಗೂ ಬೇಡ- ಅಪ್ಪನ ನೆನಪಿಗಾಗಿ ಕ್ಯಾಂಟೀನ್ ಮಂಜಣ್ಣನಿಂದ ಉಚಿತ ಅಂಬುಲೆನ್ಸ್ ಸೇವೆ

ಚಿಕ್ಕಮಗಳೂರು: ಅಪ್ಪನ ಆರೋಗ್ಯ ತೀರಾ ಹದಗೆಟ್ಟತ್ತು. ಆಸ್ಪತ್ರೆಗೆ ಹೋದರೆ ಅಂಬುಲೆನ್ಸ್ (Ambulance) ಇರಲಿಲ್ಲ. ಖಾಸಗಿ ಅಂಬುಲೆನ್ಸ್‌ಗೆ ಫೋನ್ ಮಾಡಿದರೆ ಬಾಯಿಗೆ ಬಂದ ರೇಟ್ ಹೇಳಿದರು. ಆದರೂ ಅಪ್ಪನ ಆಸ್ಪತ್ರೆಗೆ ಸೇರಿಸಿದೆ ಅವರು ಬದುಕಲಿಲ್ಲ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಕಡೂರಿನ (Kadur) ರಸ್ತೆ ಬದಿ ತಳ್ಳುವ ಗಾಡಿಯಲ್ಲಿ ಕಾಫಿ-ಟೀ ಮಾರುವ ವ್ಯಕ್ತಿಯೋರ್ವ ದುಡಿದ ದುಡ್ಡನ್ನೆಲ್ಲಾ ಕೂಡಿಟ್ಟು ಅಪ್ಪನ ಹೆಸರಿನಲ್ಲೇ ಉಚಿತ ಅಂಬುಲೆನ್ಸ್ ಬಿಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ.

ನಗರದ ಎಲ್‍ಐಸಿ ಆಫೀಸ್ ಪಕ್ಕದಲ್ಲಿ ಕ್ಯಾಂಟೀನ್ ಇಟ್ಟುಕೊಂಡಿರುವ ಮಂಜುನಾಥ್ ಎಂಬವರು ಕಡೂರು ಪಟ್ಟಣಕ್ಕೆ ಕ್ಯಾಂಟೀನ್ ಮಂಜಣ್ಣ ಎಂದೇ ಚಿರಪರಿಚಿತ. ದಿನಕ್ಕೆ ಅಬ್ಬಾಬ್ಬ ಅಂದ್ರೆ 500-600 ರೂಪಾಯಿ ದುಡಿಯುತ್ತಾರೆ. ಕ್ಯಾನ್ಸರ್ (Cancer) ಹಾಗೂ ಹೃದಯ (Heart) ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಅಪ್ಪನನ್ನ ಹೊತ್ಕೊಂಡು ಚಿಕಿತ್ಸೆಗಾಗಿ ಊರೂರು ಅಲೆದಿದ್ದರು. ಆದರೆ ಅಪ್ಪನ ಪರಿಸ್ಥಿತಿ ಚಿಂತಾಜನಕವಾಗಿದ್ದ ದಿನ ಆಸ್ಪತ್ರೆಗೆ ಹೋದರೆ ಅಂಬುಲೆನ್ಸ್ ಸಿಕ್ಕಿರಲಿಲ್ಲ. ಖಾಸಗಿಯವರು 8-10 ಸಾವಿರ ಕೇಳಿದ್ದರು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ತಡವಾಗಿತ್ತು. ಐದೇ ದಿನಕ್ಕೆ ಅಪ್ಪ ತೀರಿಕೊಂಡಿದ್ದರು. ಅದೇ ನೋವಿನಿಂದ ಕ್ಯಾಂಟೀನ್ ಮಂಜಣ್ಣ ದುಡಿದ ದುಡ್ಡನ್ನೆಲ್ಲಾ ಕೂಡಿಟ್ಟು, ಐದೂವರೆ ಲಕ್ಷದ ಅಂಬುಲೆನ್ಸ್ ತಂದು ಕ್ಯಾಂಟೀನ್ ಮುಂದೆಯೇ ನಿಲ್ಲಿಸಿಕೊಂಡಿದ್ದಾರೆ. ಯಾರೇ ಬಂದು ಕೇಳಿದರೂ ಪೆಟ್ರೋಲ್ ಹಾಕಿಸಿಕೊಂಡು ತೆಗೆದುಕೊಂಡು ಹೋಗಿ ಎಂದು ಡ್ರೈವರ್ ಜೊತೆ ಕಳಿಸುತ್ತಾರೆ. ಅದಕ್ಕೂ ದುಡ್ಡಿಲ್ಲ ಎಂದರೆ ಪೆಟ್ರೋಲ್ ತಾವೇ ಹಾಕಿಸುತ್ತಾರೆ. ಡ್ರೈವರ್ ಬಾಟ ಕೂಡ ಕೇಳಲ್ಲ. ಅವರೇ ಪ್ರೀತಿಯಿಂದ ಕೊಟ್ಟರೆ ಮಾತ್ರ ಪಡೆದುಕೊಳ್ಳುತ್ತಾರೆ. ಇದನ್ನೂ ಓದಿ: ಬೈಡನ್‌ಗಿದ್ದ ಕ್ಯಾನ್ಸರ್ ತೆಗೆದುಹಾಕಿದ ವೈದ್ಯರು – ಅಮೆರಿಕ ಅಧ್ಯಕ್ಷ ಈಗ ಸಂಪೂರ್ಣ

ಕೊರೋನಾ (Corona) ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸಿಗದೆ ಎಷ್ಟೋ ಜನ ಸಾವನ್ನಪ್ಪಿದ್ದಾರೆ. ಅದೇ ಕಾಳಜಿಯಲ್ಲಿ ಅಂಬುಲೆನ್ಸ್‍ನಲ್ಲಿ ಆಕ್ಸಿಜನ್ (Oxizen) , ಟ್ರೀಟ್‍ಮೆಂಟ್ ಕಿಟ್ (Treatment kit) ಎಲ್ಲವೂ ಇಟ್ಟಿದ್ದಾರೆ.

ಮಂಜಣ್ಣ ಸ್ಲಂನಲ್ಲಿ ವಾಸವಿದ್ದಾರೆ. ಅದೇ ಸ್ಲಂನಲ್ಲಿ ಸುಮಾರು 30ಕ್ಕೂ ಹೆಚ್ಚು ಡ್ರೈವರ್‍ಗಳು ಇದ್ದಾರೆ. ಡ್ರೈವರ್‍ಗಳು ಕೂಡ ಯಾವುದೇ ಹೊತ್ತಲ್ಲಿ ಹೋದರೂ ಆಗಲ್ಲ ಅನ್ನದೆ ಅಂಬುಲೆನ್ಸ್ ತೆಗೆದುಕೊಂಡು ಹೋಗುತ್ತಾರೆ. ಕಳೆದ ಆರು ತಿಂಗಳಿಂದ ಅಂಬುಲೆನ್ಸ್ ಸೇವೆ ಒದಗಿಸಿರೋ ಮಂಜಣ್ಣ 35ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಸೇವೆ ನೀಡಿದ್ದಾರೆ. ಇವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಶಾಸಕರ ದಾವಣಗೆರೆಯ ಮನೆ ಮೇಲೂ ರೇಡ್- ಇಂದು ಬೇನಾಮಿ ಆಸ್ತಿ ಮೇಲೂ ದಾಳಿ ಸಾಧ್ಯತೆ

Comments

Leave a Reply

Your email address will not be published. Required fields are marked *