ಬಹುಕೋಟಿ ವಂಚನೆ ಕೇಸ್‌ – ಐಶ್ವರ್ಯಗೌಡ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು

ಬೆಂಗಳೂರು: ಐಶ್ವರ್ಯಗೌಡ (Aishwarya Gowda) ಬಹುಕೋಟಿ ವಂಚನೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಾ ಇದೆ.

ಎರಡು ದಿನಗಳ ಹಿಂದಷ್ಟೇ ಮಾಜಿ ಸಂಸದ ಡಿ.ಕೆ ಸುರೇಶ್‌ಗೆ (DK Suresh) ಇಡಿ ಸಮನ್ಸ್ ನೀಡಿದ್ದು, ಗುರುವಾರ (ಇಂದು) ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಈಗ ತ‌ನಿಖೆ ಮತ್ತೊಂದು ಮಜಲಿಗೆ ಹೋಗಿದೆ. ಇಡಿ (ED) ಅಧಿಕಾರಿಗಳು ಐಶ್ವರ್ಯಗೌಡ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಶುರು ಮಾಡಿದೆ.

ಐಶ್ವರ್ಯಗೌಡ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದು, ಅಕ್ರಮ ಹಣ ವರ್ಗಾವಣೆಯಿಂದ ಎಷ್ಟು ಹಣ ಸಂಪಾದನೆ ಮಾಡಿದ್ದಾಳೆ? ಎಲ್ಲೆಲ್ಲಿಗೆ ಹಣ ವರ್ಗಾವಣೆ ಮಾಡಲಾಗಿದೆ? ಯಾರ‍್ಯಾರ ಸಂಪರ್ಕ ಮಾಡಿದ್ದಾಳೆ? ಅನ್ನೋದನ್ನ ಬಯಲಿಗೆಳೆಯಲು ಇಡಿ ತನಿಖೆ ಮುಂದುವರಿಸಿದೆ. ಡಿ.ಕೆ ಸುರೇಶ್‌ ಅವರಿಗೂ ಆಸ್ತಿ ಮುಟ್ಟುಗೋಲು ಬಿಸಿ ತಟ್ಟುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ಈಗ ಡಿಕೆಸು ಸರದಿ
ಐಶ್ವರ್ಯಗೌಡ ಬಹುಕೋಟಿ ಹಗರಣದಲ್ಲಿ ಈಗ ಮಾಜಿ ಸಂಸದ ಡಿಕೆ ಸುರೇಶ್ ಸರದಿ. ಐಶ್ವರ್ಯಗೌಡ ಪ್ರತಿ ಕಾರ್ಯಕ್ರಮದಲ್ಲಿ ನಾನು ಡಿಕೆ ಸುರೇಶ್ ಸಹೋದರಿ ಅಂತ ಹೇಳಿಕೊಂಡು ಓಡಾಡ್ತಾ ಇದ್ರು. ಇಡಿ ಐಶ್ವರ್ಯಳನ್ನ ಬಂಧಿಸಿದ ಬಳಿಕ ದಾಖಲಾತಿ, ಹಣದ ವರ್ಗಾವಣೆ ಎಲ್ಲವನ್ನೂ ಪರಿಶೀಲಿಸಿ ಒಂದಷ್ಟು ಬಲವಾದ ಸಾಕ್ಷ್ಯಗಳನ್ನು ಇಟ್ಟುಕೊಂಡು ಡಿಕೆಸುಗೆ ಸಮನ್ಸ್ ನೀಡಿದೆ.

ಮೂಲಗಳ ಪ್ರಕಾರ, ಒಂದೆರಡು ವರ್ಷದಲ್ಲಿ ಐಶ್ವರ್ಯ ಮತ್ತು ಡಿಕೆ ಸುರೇಶ್ ನಡುವೆ ಹಣಕಾಸಿನ ವಹಿವಾಟು ನಡೆದಿದೆ ಅನ್ನೋದು ಇಡಿ ವಾದ. ಹೀಗಾಗಿಯೇ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.