ರಷ್ಯಾ, ಪೋಲೆಂಡ್ ಹಿಂದಿಕ್ಕಿ ಅರ್ಮೇನಿಯಾದ ರಕ್ಷಣಾ ಟೆಂಡರ್ ಗೆದ್ದ ಭಾರತ

ನವದೆಹಲಿ: ರಕ್ಷಣಾ ವಲಯದಲ್ಲಿ ಇಲ್ಲಿಯವರೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಮುಂಚೂಣಿಯಲ್ಲಿ ಇರುತ್ತಿತ್ತು. ಆದರೆ ಈಗ ನಿಧಾನವಾಗಿ ಭಾರತವೂ ಈ ಕ್ಷೇತ್ರದಲ್ಲಿ ಪ್ರವೇಶಿಸುತ್ತಿದ್ದು, ಇದೇ ಮೊದಲ ಬಾರಿಗೆ ಯುರೋಪ್ ರಾಷ್ಟ್ರವಾದ ಅರ್ಮೇನಿಯಾದ ಶಸ್ತ್ರಾಸ್ತ್ರ ಟೆಂಡರ್ ಗೆದ್ದುಕೊಂಡಿದೆ.

ಶಸ್ತ್ರಾಸ್ತ್ರ ಪತ್ತೆ ಮಾಡುವ ರೇಡಾರ್ ಖರೀದಿ ಸಂಬಂಧ ಅರ್ಮೇನಿಯಾ ಟೆಂಡರ್ ಆಹ್ವಾನಿಸಿತ್ತು. ಈ ಟೆಂಡರ್ ನಲ್ಲಿ ರಷ್ಯಾ, ಪೋಲೆಂಡ್ ಸಹ ಭಾಗವಹಿಸಿತ್ತು. ಆದರೆ ಭಾರತ ಈ ಎರಡು ದೇಶಗಳನ್ನು ಹಿಂದಿಕ್ಕಿ 40 ದಶಲಕ್ಷ ಡಾಲರ್(289.27 ಕೋಟಿ ರೂ.) ಟೆಂಡರ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ರಕ್ಷಣಾ ಸಲಕರಣೆಗಳನ್ನು ತಯಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಈಗ ಟೆಂಡರ್ ಗೆದ್ದಿರುವುದು ಮೇಕ್ ಇನ್ ಇಂಡಿಯಾಗೆ ಸಿಕ್ಕ ದೊಡ್ಡ ಯಶಸ್ಸು ಎಂದೇ ವಿಶ್ಲೇಷಿಸಲಾಗುತ್ತಿದೆ.

ಅರ್ಮೇನಿಯಾದ ರಕ್ಷಣಾ ಅಧಿಕಾರಿಗಳು ರಷ್ಯಾ ಹಾಗೂ ಪೋಲ್ಯಾಂಡ್ ದೇಶಗಳು ಅಭಿವೃದ್ಧಿ ಪಡಿಸಿದ ರೇಡಾರ್ ಗಳನ್ನು ಪರೀಕ್ಷಿಸಿದ್ದರು. ಆದರೆ ಅಂತಿಮವಾಗಿ ಭಾರತ ಅಭಿವೃದ್ಧಿ ಪಡಿಸಿರುವ 4 ‘ಸ್ವಾತಿ’ ರೇಡಾರ್ ಗಳನ್ನು ಖರೀದಿಸಲು ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ಸ್ವಾತಿ ವಿಶೇಷತೆ ಏನು?
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‍ಡಿಒ) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಸಂಸ್ಥೆಗಳು ಈ ಶಸ್ತ್ರಾಸ್ತ್ರ ಪತ್ತೆ ಹಚ್ಚು ರೇಡಾರ್ ಅಭಿವೃದ್ಧಿ ಪಡಿಸಿದೆ. 50- ಕಿ.ಮೀ ದೂರದ ವ್ಯಾಪ್ತಿ ಪ್ರದೇಶ ಮಾರ್ಟಾರ್, ಶೆಲ್ ರಾಕೆಟ್  ದಾಳಿಯನ್ನು ನಿಖರವಾಗಿ ಪತ್ತೆ ಮಾಡುವ ಸಾಮರ್ಥ್ಯ ‘ಸ್ವಾತಿ’ಗಿದೆ.

2019ರ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅರ್ಮೇನಿಯಾದ ಪ್ರಧಾನಿ ನಿಕೋಲ್ ಪಶಿನಿಯನ್ ಜೊತೆ ಮಾತುಕತೆ ನಡೆಸಿದ್ದರು.

ಉರಿ ಮೇಲಿನ ದಾಳಿಯ ಬಳಿಕ ನಡೆದ ಮೊದಲ ಸರ್ಜಿಕಲ್ ಸ್ಟ್ರೈಕ್ ವೇಳೆ ಮಾಧ್ಯಮಗಳು ಕೇಳಿದ್ದ ಪ್ರಶ್ನೆಗೆ ರಕ್ಷಣಾ ಸಚಿವರಾಗಿದ್ದ ದಿವಂಗತ ಮನೋಹರ್ ಪರಿಕ್ಕರ್, ಪಾಕಿಸ್ತಾನದ ಗುಂಡಿನ ದಾಳಿಯನ್ನು ಗುರುತಿಸಲು ಶಸ್ತ್ರಾಸ್ತ್ರ ಪತ್ತೆಹಚ್ಚುವ ರೇಡಾರ್ ‘ಸ್ವಾತಿ’ ಅನ್ನು ಬಳಸಲಾಗಿತ್ತು. ಈ ರೇಡಾರ್ ಅನ್ನು ಮೂರು ತಿಂಗಳ ನಂತರ ಸೇನೆಗೆ ಸೇರ್ಪಡೆಗೊಳಿಸಲಾಗಿತ್ತು. ಸ್ವಾತಿಯ ನೆರವಿನಿಂದ ಪಾಕ್ ಸೇನೆಯ 40 ಫಿರಂಗಿಗಳನ್ನು ನಾಶಪಡಿಸಲಾಗಿತ್ತು ಎಂದು ಅವರು ವಿವರಿಸಿದ್ದರು.

 

Comments

Leave a Reply

Your email address will not be published. Required fields are marked *