ಹಾಸನ: ಕಾರು ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಉದಯಪುರದ ಬಳಿ ನಡೆದಿದೆ.
ವಿವೇಕ್ ನಾಯಕ್ (40), ಪತ್ನಿ ರೇಷ್ಮಾ (35), ಮಗಳು ವಿನಂತಿ (8) ಮತ್ತು ಮಗ ಸೇವಂತ್ ನಾಯಕ್ (6) ಮೃತ ದುರ್ದೈವಿಗಳು. ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ವಿವೇಕ್ ನಾಯಕ್ ಬೆಂಗಳೂರಿನ ಸ್ಪೈ ಕಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಗುರುವಾರ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ತನ್ನ ಕಾರಿನಲ್ಲಿ ಬೆಂಗಳೂರಿನಿಂದ ಹುಟ್ಟೂರು ಕುಂದಾಪುರಕ್ಕೆ ತೆರಳುತ್ತಿದ್ದರು.
ಮುಂಜಾನೆ ಸುಮಾರು 8.30ಕ್ಕೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲೂಕಿನ ಉದಯಪುರದ ಬಳಿ ರಸ್ತೆ ಬದಿಯ ಕಂಬಕ್ಕೆ ಗುದ್ದಿದ ಕಾರು ನಂತರ ಅಲ್ಲೇ ಇದ್ದ ಶೌಚಾಲಯದ ಗೋಡೆಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಇಂಜಿನ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು ವಿವೇಕ್ ನಾಯಕ್, ರೇಷ್ಮಾ, ವಿನಂತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಗ ಸೇವಂತ್‍ಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ತಿಳಿಸಿದ್ದಾರೆ.

ಅಪಘಾತಕ್ಕೆ ಅತಿ ವೇಗವೇ ಕಾರಣ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದಲ್ಲದೇ ಬೆಂಕಿ ಹೊತ್ತಿಕೊಂಡಿದ್ದರಿಂದ ಸಂಪೂರ್ಣ ಸುಟ್ಟು ಹೋಗಿದೆ. ಕಾರನಲ್ಲಿದ್ದ ಏರ್ ಬ್ಯಾಗ್ ಓಪನ್ ಆದರೂ ಕಾರಿನಲ್ಲಿದ್ದವರು ಹೊರ ಬರಲಾಗದೇ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನಾಲ್ವರ ಮೃತದೇಹಗಳನ್ನು ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪ್ರತ್ಯಕ್ಷದರ್ಶಿ ವೇಣುಗೋಪಾಲ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply