6ನೇ ಮಗುವೂ ಹೆಣ್ಣು- ರೊಚ್ಚಿಗೆದ್ದು 4 ದಿನದ ಹಸುಳೆಯನ್ನೇ ಕೊಂದ ಪಾಪಿ ತಂದೆ

ಗಾಂಧಿನಗರ: ತನ್ನ ಆರನೇ ಮಗುವೂ ಹೆಣ್ಣು ಎಂಬ ಕಾರಣಕ್ಕೆ ತಂದೆಯೇ ನಾಲ್ಕು ದಿನದ ಹಸುಳೆಯನ್ನು ಕೊಂದ ಮನಕಲಕುವ ಘಟನೆ ಗುಜರಾತಿನ ಗಾಂಧಿನಗರದಲ್ಲಿ ನಡೆದಿದೆ.

ವಿಷ್ಣು ರಾಥೋಡ್ ಎಂಬುವನೇ ಮಗುವನ್ನು ಕೊಂದ ಪಾಪಿ ತಂದೆ. ಈತನಿಗೆ ಆಗಲೇ ಐದು ಹೆಣ್ಣು ಮಕ್ಕಳಿದ್ದವು. ಈಗ ಹುಟ್ಟಿದ ಆರನೇ ಮಗುವೂ ಹೆಣ್ಣು ಎಂದು ತಿಳಿದ ವಿಷ್ಣು ಹೆಂಡತಿಯ ಮನೆಗೆ ಹೋಗಿ ಮಗುವನ್ನು ಚಾಕುವಿನಿಂದ ಇರಿದು ಕೊಂದುಹಾಕಿದ್ದಾನೆ.

ಭಾನುವಾರ ರಾತ್ರಿ 8.15ರ ವೇಳೆಗೆ ಮಾರಣಾಂತಿಕವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ತಂದಾಗ ಸ್ಥಿತಿ ಗಂಭೀರವಾಗಿತ್ತು. ಹಾಗಾಗಿ ಕೂಡಲೇ ಶಸ್ತ್ರಚಿಕಿತ್ಸೆಗೆಂದು ತೆಗೆದುಕೊಂಡು ಹೋಗಲಾಯಿತು ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಘಟನೆ ನಡೆದ ಮಸಂಗ್ ಹಳ್ಳಿಯು ಗಾಂಧಿನಗರದಿಂದ ಸಮೀಪವಿದೆ. ಆದರೂ ಮಗುವನ್ನು ಬದುಕಿಸಿಕೊಳ್ಳಲು ಆಗಲಿಲ್ಲ.

ರಾಥೋಡ್ ಆರನೇ ಮಗುವೂ ಹೆಣ್ಣೆಂದು ತಿಳಿದಾಗ ತುಂಬಾ ಕೋಪಗೊಂಡಿದ್ದ. ಮಗುವಿನ ಪಕ್ಕೆಲಬಿನ ಭಾಗಕ್ಕೆ ಚೂರಿಯಿಂದ ಇರಿದು ಕೊಲೆಗೈದಿದ್ದಾನೆ ಮಾಧ್ಯಮಗಳು ವರದಿ ಮಾಡಿವೆ.

ಮಗುವಿನ ತಾಯಿಯ ತಂದೆ(ತಾತ) ಜಸ್ವಂತ್ ಜಸ್ಟಿನ್ ಪ್ರತಿಕ್ರಿಯಿಸಿ, ಮಗುವನ್ನು ಕೊಂದು ವಿಷ್ಣು ಓಡಿಹೋಗಲು ಯತ್ನಿಸಿದ. ಆದರೆ ನನ್ನ ಮಗಳು ಹಾಗೂ ಇತರರು ಸೇರಿ ಗದ್ದಲ ಮಾಡಿದ್ದಾರೆ. ಆಗ ನೆರೆಹೊರೆಯವರ ಸಹಾಯದಿಂದ ಅವನನ್ನು ಹಿಡಿಯಲಾಯಿತು. ತಕ್ಷಣ 108 ಅಂಬುಲೆನ್ಸ್ ಗೆ ಕರೆ ಮಾಡಿ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿಸಿದ್ದಾರೆ.

ಈಗ ಸಧ್ಯ ರಾಥೋಡ್ ಪೊಲೀಸರ ಕಸ್ಟಡಿಯಲ್ಲಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಖಿಲ್ ಪೊಲೀಸರು, ಎಫ್‍ಐಆರ್ ದಾಖಲಿಸುತ್ತಿದ್ದೇವೆ, ಈಗ ಯಾವುದೇ ಮಾಹಿತಿ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *