ರೈತರಿಗೆ ಒಂದೆಡೆ ಸಂತಸ- ಮತ್ತೊಂದೆಡೆ ಪ್ರವಾಹದ ಭೀತಿ!

ರಾಯಚೂರು: ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ರೈತ ಒಂದೆಡೆ ಸಂತಸ ಪಡುತ್ತಿದ್ದರೆ, ಮತ್ತೊಂದೆಡೆ ಪ್ರವಾಹದ ಭೀತಿ ಎದುರಿಸುತ್ತಿದ್ದಾನೆ.

ಹೌದು, ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಸಿರುವುದು ಒಂದೆಡೆ ರೈತರಿಗೆ ಸಂತಸ ತಂದರೆ, ಇನ್ನೊಂದೆಡೆ ಪ್ರವಾಹ ಭೀತಿ ಎದುರಾಗಿದೆ. ಜಲಾಶಯದಿಂದ 1 ಲಕ್ಷ ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನೆಲೆ ಜಿಲ್ಲೆಯ ನಡುಗಡ್ಡೆ ಗ್ರಾಮಗಳು ಜಲಾವೃತವಾಗಿವೆ.

ಲಿಂಗಸುಗೂರಿನ ಮ್ಯಾದರಗಡ್ಡಿ, ಕಡದರ ಗಡ್ಡಿ ಸೇರಿದಂತೆ ಮೂರು ಗಡ್ಡೆಗಳ ಸುತ್ತಲೂ ನೀರು ಆವರಿಸಿಕೊಂಡಿದೆ. ಸಂಚಾರ, ವಿದ್ಯುತ್ ಸೇರಿದಂತೆ ಎಲ್ಲವೂ ಕಡಿತಗೊಂಡಿದೆ. ಜಾನುವಾರುಗಳನ್ನ ಕಟ್ಟಿಕೊಂಡು ಗಡ್ಡೆಯಲ್ಲೇ ಕುಟುಂಬಗಳು ಉಳಿದುಕೊಂಡಿವೆ. ಶೀಲಹಳ್ಳಿ ಸೇತುವೆ ಈಗಾಗಲೇ ಮುಳುಗಿದ್ದು, ಐದಾರು ಗ್ರಾಮಗಳು ರಸ್ತೆ ಸಂಪರ್ಕ ಕಳೆದುಕೊಂಡಿದೆ.

ರಾಯಚೂರು ತಾಲೂಕಿನ ಕುರ್ವಕುಲಾ, ಕುರ್ವಾಕುರ್ದಾ ಗ್ರಾಮಗಳು ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಹೆಚ್ಚಿನ ಪ್ರಮಾಣ ನೀರು ನದಿಗೆ ಹರಿದು ಬಂದಿದ್ದರಿಂದ ರೈತರ ಪಂಪ್ ಸೆಟ್ ಗಳು ಸಹ ನೀರಿನಲ್ಲಿ ಮುಳುಗಿಹೋಗಿವೆ.

ಈಗಾಗಲೇ ಜಿಲ್ಲಾಡಳಿತವು ನೀರಿನಲ್ಲಿ ಈಜುವುದು, ತೆಪ್ಪ ಬಳಸುವುದನ್ನೂ ನಿಷೇಧಿಸಿದೆ. ಅಲ್ಲದೇ ನದಿ ತಟದ ಬಳಿ ಯಾರೂ ಹೋಗಬಾರದು ಎಂದು ಮುನ್ನೆಚ್ಚರಿಕೆ ನೀಡಿದೆ. ಅಗತ್ಯವಿದ್ದಲ್ಲಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *