ಟಿ20 ಕ್ರಿಕೆಟ್‍ನಲ್ಲಿ 14 ವರ್ಷದಿಂದ ಧೋನಿ ಹೆಸರಿನಲ್ಲಿದೆ ಕೆಟ್ಟ ದಾಖಲೆ

ಮುಂಬೈ: ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಮೂರು ಐಸಿಸಿ ಟೈಟಲ್ಸ್ ಗೆದ್ದ ಏಕೈಕ ಕ್ಯಾಪ್ಟನ್ ಆಗಿದ್ದಾರೆ. ಅಲ್ಲದೇ ದಿ ಬೆಸ್ಟ್ ಮ್ಯಾಚ್ ಫಿನಿಶರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಆದರೂ 14 ವರ್ಷದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿ ಜೀವನದಲ್ಲಿ ಧೋನಿ ಅನಗತ್ಯ ದಾಖಲೆಯನ್ನು ಹೊಂದಿದ್ದಾರೆ.

2006ರಲ್ಲಿ ಮೊದಲ ಟಿ20 ಪಂದ್ಯವನ್ನಾಡಿದ ಧೋನಿ, ಇದುವರೆಗೂ 98 ಪಂದ್ಯಗಳನ್ನು ಆಡಿದ್ದಾರೆ. ಆದರೆ ಒಂದು ಪಂದ್ಯದಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಲು ಧೋನಿ ವಿಫಲರಾಗಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ 71ಕ್ಕೂ ಹೆಚ್ಚು ಟಿ20 ಪಂದ್ಯಗಳಲ್ಲಿ ಆಡಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆಯದ ಏಕೈಕ್ ಆಟಗಾರ ಧೋನಿ. ಕಳೆದ ವರ್ಷದಿಂದ ಟೀಂ ಇಂಡಿಯಾಗೆ ದೂರವಾಗಿರುವ ಧೋನಿ ಅಕ್ಟೋಬರಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಆಡಿದ ಬಳಿಕ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 98 ಟಿ20 ಪಂದ್ಯಗಳನ್ನು ಆಡಿರುವ ಧೋನಿ 37.6 ಸರಾಸರಿಯಲ್ಲಿ 1,282 ರನ್ ಗಳಿಸಿದ್ದಾರೆ. ಇದರಲ್ಲಿ 116 ಬೌಂಡರಿ, 52 ಸಿಕ್ಸರ್ ಸೇರಿದ್ದು, 2 ಅರ್ಧ ಶತಕಗಳನ್ನು ಮಾತ್ರ ಗಳಿಸಿದ್ದಾರೆ. ಏಕದಿನ ಮತ್ತು ಟಿ20 ಮಾದರಿಯಲ್ಲಿ ಹೆಚ್ಚು ಬಾರಿ ಸ್ಲಾಗ್ ಓವರ್ ಗಳಲ್ಲಿ ಬ್ಯಾಟಿಂಗ್ ಇಳಿಯುತ್ತಿದ್ದ ಧೋನಿ ಸಾಮಾನ್ಯವಾಗಿ ಕಡಿಮೆ ಎಸೆತಗಳನ್ನ ಎದುರಿಸುವ ಅವಕಾಶ ಪಡೆಯುತ್ತಿದ್ದರು.

ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಗೆಲ್ಲದೇ ಟಿ20 ಮಾದರಿಯಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಧೋನಿ ಮೊದಲ ಸ್ಥಾನದಲ್ಲಿದ್ದರೆ. ಉಳಿದಂತೆ ವೆಸ್ಟ್ ಇಂಡೀಸ್ ಆಟಗಾರ ದಿನೇಶ್ ರಾಮ್ದಿನ್-71 ಪಂದ್ಯ, ಅಫ್ಘಾನಿಸ್ತಾನದ ತಂಡದ ಅಸ್ಗರ್ ಅಫ್ಘಾನ್-69 ಪಂದ್ಯ, ಐರ್ಲೆಂಡ್ ತಂಡದ ವಿಲಿಯಂ ಪೋರ್ಟರ್ ಫೀಲ್ಡ್- 61 ಪಂದ್ಯಗಳೊಂದಿಗೆ ಕ್ರಮವಾಗಿ 2,3,4ನೇ ಸ್ಥಾನವನ್ನು ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *