ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ

ಬೆಂಗಳೂರು: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ನಾನು ಇನ್ನು ಮುಂದೆ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲವೆಂದು ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಇನ್ನು ಮುಂದೆ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಸಂಪೂರ್ಣವಾಗಿ ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

ನಾನು ಇನ್ನು ಮುಂದೆ ಸಕ್ರೀಯವಾಗಿ ರಾಜಕಾರಣದಲ್ಲಿ ಇರುವುದಿಲ್ಲ, ಬೇರೆ ರೂಪದಲ್ಲಿ ಸಮಾಜಸೇವೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಮಾಡುವ ಕೆಲಸ ಮಾಡಿ ಆಗಿದೆ, ಮಾಡಿದ ಕೆಲಸದಲ್ಲಿ ತೃಪ್ತಿ ಪಡೆದುಕೊಂಡು ಜೀವನ ಸಾಗಿಸುತ್ತೇನೆ ಎಂದು  ಹೇಳಿಕೆ ನೀಡಿದ್ದಾರೆ.

ಮೈಸೂರು ಸಂಸ್ಥಾನದ ಸಾಗರದ ಕಾಗೋಡುವಿನಲ್ಲಿ 1932 ರ ಸೆಪ್ಟೆಂಬರ್ 10 ಜನಿಸಿದ್ದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಾಗರದಲ್ಲಿನ ಹೆಣ್ಣೂರಿನಲ್ಲಿ ಮುಗಿಸಿ, ಬಿ.ಕಾಂ. ಹಾಗೂ ಬಿ.ಎಲ್ ಪದವಿಯನ್ನು ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಪೂರ್ಣಗೊಳಿಸಿದ್ದರು. ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ತಿಮ್ಮಪ್ಪನವರು, 1961ರಲ್ಲಿ ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷರಾಗುವ ಮೂಲಕ ಸಕ್ರೀಯ ರಾಜಕೀಯಕ್ಕೆ ಎಂಟ್ರಿ ಕೊಟ್ಟರು.

ರಾಜಕೀಯದಲ್ಲಿ ಸಕ್ರೀಯರಾಗಿ 5 ಬಾರಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡು 1999 ರಲ್ಲಿ ಮೊದಲ ಬಾರಿಗೆ ಕಾಗೋಡು ಸಮಾಜ ಕಲ್ಯಾಣ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಸಚಿವರಾಗಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಗೊಂಡು, ಮಾಜಿ ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲಿ ವಿಧಾನಸಭಾ ಅಧ್ಯಕ್ಷರಾಗಿ, ಬಳಿಕ ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರು ಶಿವಮೊಗ್ಗದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.

Comments

Leave a Reply

Your email address will not be published. Required fields are marked *