ಸುಪ್ರೀಂ ಕೋರ್ಟ್ ತೀರ್ಪಿಗೆ ಕೇಂದ್ರ ಸರ್ಕಾರ ಕಾರಣ – ಎಚ್‍ಡಿಡಿ

ಬೆಂಗಳೂರು: ಸುಪ್ರೀಂ ಕೋರ್ಟಿನಲ್ಲಿ ಚುನಾವಣೆ ಆಯೋಗ ಈ ಚುನಾವಣೆಯನ್ನು ಮುಂದೂಡಬಹುದು ಎಂದು ಹೇಳಿದೆ. ಹೀಗಾಗಿ ಉಪಚುನಾವಣೆ ಮುಂದೂಡಿಕೆಯಾಗಿದೆ. ಆಯೋಗಕ್ಕೆ ಕೇಂದ್ರ ಸರ್ಕಾರ ಸೂಚಿಸಿರಬಹುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬೆಳವಣಿಗೆಯಿಂದಾಗಿ ಸ್ವಾಯತ್ತ ಸಂಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಯಡಿಯೂರಪ್ಪನವರ ಪ್ರಭಾವ ಕೇಂದ್ರ ಸರ್ಕಾರದ ಮೇಲೆ ಇರಬಹುದು. ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಮೂಲಕ ಹೀಗೆ ಮಾಡಿಸಿರಬಹುದು. ಹೀಗಾಗಿ ಚುನಾವಣಾ ಆಯೋಗ ಅನರ್ಹ ಶಾಸಕರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‍ನಲ್ಲಿ ಮಧ್ಯಸ್ಥಿಕೆವಹಿಸಿದೆ ಅನ್ನಿಸುತ್ತಿದೆ ಎಂದು ಎಚ್‍ಡಿಡಿ ಕೇಂದ್ರದ ವಿರುದ್ಧ ಹರಿಹಾಯ್ದರು.

ಮೊನ್ನೆ ಕೂಡ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ನೋಟಿಸ್ ನೀಡದಿದ್ದರೂ ಬಂದು ವಾದ ಮಾಡಿತ್ತು. ಈ ವಿಚಾರದಲ್ಲಿ ಚುನಾವಣೆ ಆಯೋಗದ ನಡೆ ಸರಿಯಲ್ಲ. ಆಯೋಗ ಸ್ವತಂತ್ರವಾಗಿ ಕೆಲಸ ನಿರ್ವಹಣೆ ಮಾಡಬೇಕು. ಆದರೆ ಈ ಪ್ರಕರಣದಲ್ಲಿ ಆ ರೀತಿ ನಡೆದುಕೊಂಡಿಲ್ಲ. ಚುನಾವಣಾ ಆಯೋಗದ ಮಧ್ಯಸ್ಥಿಕೆಯಿಂದ ಉಪಚುನಾವಣೆ ಮುಂದೂಡಿಕೆಯಾಗಿದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.

ಇಂದು ಪಾರ್ಲಿಮೆಂಟರಿ ಬೋರ್ಡ್ ಮೀಟಿಂಗ್‍ನಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆದಿತ್ತು. ಅದರ ಮಧ್ಯೆಯೇ ಕೋರ್ಟ್ ತೀರ್ಪು ಬಂತು. ಪ್ರಾದೇಶಿಕ ಪಕ್ಷವಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಐಕ್ಯತೆಯಿಂದ ಚುನಾವಣೆ ಎದುರಿಸಲು ಚರ್ಚೆ ಆಗಿದೆ. ಮಹಾಲಯ ಅಮಾವಾಸ್ಯೆಯಾದ ಮೇಲೆ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದುಕೊಂಡಿದ್ದೆವು. ಈ ಕುರಿತು ಕುಮಾರಸ್ವಾಮಿ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

ಆರು ತಂಡ ರಚನೆ ಮಾಡುತ್ತೇವೆ. ಒಂದು ತಂಡದಲ್ಲಿ ಹತ್ತು ಜನರ ಇರುತ್ತಾರೆ. ಇದರಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಸಹ ಇದರಲ್ಲಿ ಇರುತ್ತಾರೆ. ರಾಜ್ಯದ 30 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡುತ್ತಾರೆ. ಸಮಸ್ತ ಜಾತಿಗೆ ಸಿಗುವ ರೀತಿ ಜಿಲ್ಲಾ, ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡುತ್ತೇವೆ ಎಂದು ಎಚ್‍ಡಿಡಿ ಈ ವೇಳೆ ತಿಳಿಸಿದರು.

Comments

Leave a Reply

Your email address will not be published. Required fields are marked *